ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ವಿಧಿಸುವ ಅನಿವಾರ್ಯತೆ ಸೃಷ್ಟಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಯವಿಟ್ಟು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ತಜ್ಞರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಜನ ಬೇಜವಾಬ್ದಾರಿಯಿಂದ ವರ್ತಿಸಿದರೆ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕಾಗುತ್ತದೆ. ಇನ್ನೂ ಒಂದು ವಾರದವರೆಗೆ ಪರಿಸ್ಥಿತಿ ಅವಲೋಕನ ನಡೆಸಲಾಗುವುದು. ಒಂದು ವಾರದ ನಂತರ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 17 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದ ಜನರಲ್ಲಿ ನಾನು ಮನವಿ ಮಾಡುತ್ತೇನೆ. ದಯವಿಟ್ಟು ನಿಯಮಗಳನ್ನು ಪಾಲಿಸಿ. ಮತ್ತೊಮ್ಮೆ ಲಾಕ್ಡೌನ್ ವಿಧಿಸುವ ಅನಿವಾರ್ಯತೆ ಸೃಷ್ಟಿಸಬೇಡಿ ಎಂದು ಯಡಿಯೂರಪ್ಪ ಹೇಳಿದ್ದಾರೆ.