ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಗ್ರಾಹಕರಿಗೆ ಶಾಕ್ ನೀಡಿದೆ.
ಮಾರುತಿ ಸುಜುಕಿ ಕಾರು ಖರೀದಿಸುವ ಪ್ಲಾನ್ ಇದ್ರೆ ಈ ತಿಂಗಳು ಖರೀದಿ ಮಾಡಿ. ಯಾಕೆಂದ್ರೆ ಜನವರಿ 2022 ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿಯಾಗಲಿವೆ. ಕಳೆದ ಒಂದು ವರ್ಷದಲ್ಲಿ ವಾಹನಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿರುವುದರಿಂದ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಕಂಪನಿ ಹೇಳಿದೆ.
ಮಾರುತಿ ಸುಜುಕಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ. ಕಳೆದ ಒಂದು ವರ್ಷದಲ್ಲಿ ವಿವಿಧ ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ವಾಹನಗಳ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದ್ದರಿಂದ, ಗ್ರಾಹಕರಿಗೆ ಕೆಲವು ಹೆಚ್ಚುವರಿ ವೆಚ್ಚಗಳನ್ನು ವರ್ಗಾಯಿಸುವುದು ಕಂಪನಿಗೆ ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.
ಮಾರುತಿ ಸುಜುಕಿ, ಕಾರಿನ ಬೆಲೆಗಳು ಎಷ್ಟು ಹೆಚ್ಚಾಗಲಿವೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಬೇರೆ ಬೇರೆ ಮಾದರಿಗಳಿಗೆ ಬೆಲೆ ಬೇರೆ ಬೇರೆಯಾಗಿರಲಿದೆ ಎಂದು ಕಂಪನಿ ಹೇಳಿದೆ.
ಮಾರುತಿ ಸುಜುಕಿ ಬೆಲೆ ಏರಿಕೆ ನಿರ್ಧಾರ ಪ್ರಕಟಿಸಿದ್ದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಭಾರತದಲ್ಲಿನ ಅತಿದೊಡ್ಡ ಕಾರು ತಯಾರಕ ಕಂಪನಿಯು ಕಚ್ಚಾ ವಸ್ತುಗಳ ಬೆಲೆಗಳು ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳಿಂದಾಗಿ ತನ್ನ ಕೆಲ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡಿತ್ತು.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮಾರುತಿ ಸುಜುಕಿ ಬೆಲೆ ಏರಿಕೆ ಘೋಷಿಸಿತ್ತು. ಆಯ್ದ ಮಾದರಿಗಳ ಬೆಲೆಗಳನ್ನು ಶೇಕಡಾ 1.9 ರಷ್ಟು ಕಂಪನಿ ಹೆಚ್ಚಿಸಿದೆ. ಮಾದರಿಯ ಆಧಾರದ ಮೇಲೆ ಬೆಲೆ ಏರಿಕೆಯು 1,000 ರೂಪಾಯಿಯಿಂದ 22,500 ರೂಪಾಯಿಯಾಗಿದೆ.
ಕಳೆದ ಹಲವು ತಿಂಗಳುಗಳಿಂದ ಆಟೋ ಉದ್ಯಮವು ಕಠಿಣ ಸವಾಲುಗಳನ್ನು ಎದುರಿಸುತ್ತಿದೆ. ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ.