ದೇಶದಲ್ಲಿ ಇನ್ನು ಮುಂದೆ ಪ್ರಯಾಣಿಕ ಕಾರುಗಳಲ್ಲಿ ಆರು ಏರ್ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್ 1 ರಿಂದ ಉತ್ಪಾದನೆಯಾಗುವ ಕಾರುಗಳಿಗೆ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.
ಪ್ರಯಾಣಿಕ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ಲಾನ್ ಬಗ್ಗೆ ಮಾರುತಿ ಸುಜುಕಿ ಕಳವಳ ವ್ಯಕ್ತಪಡಿಸಿದೆ.
ಈ ಕ್ರಮವು ಈಗಾಗಲೇ ಹೆಣಗಾಡುತ್ತಿರುವ ಕಂಪನಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಸಂಭಾವ್ಯ ಖರೀದಿದಾರರು ದರ ದುಬಾರಿಯಾಗುವ ಕಾರಣ ಖರೀದಿಯಿಂದ ದೂರವಾಗಬಹುದು, ಮಾರಾಟದ ಮೇಲೆ ಪರಿಣಾಮ ಬೀರಲಿದೆ ಂದು ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ. ಭಾರ್ಗವ ತಿಳಿಸಿದ್ದಾರೆ.
ಕರಡು ನಿಯಮಗಳು ರಸ್ತೆ ಸುರಕ್ಷತಾ ಕ್ರಮಗಳ ಸರಣಿಯ ಭಾಗವಾಗಿದ್ದು, ಅಂತಿಮ ತೀರ್ಮಾನ ಹೊರ ಬೀಳಬೇಕಿದೆ. ತಯಾರಿಸಲಾದ ಎಲ್ಲಾ ಕಾರುಗಳಲ್ಲಿ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿಗೆ ಏರ್‌ಬ್ಯಾಗ್ ಕಡ್ಡಾಯವಾಗಿದೆ. ಇನ್ನೂ ನಾಲ್ಕು ಏರ್‌ಬ್ಯಾಗ್‌ಗಳನ್ನು ಸೇರಿಸುವುದರಿಂದ ವೆಚ್ಚವು 17,600 ರೂ. ನಷ್ಟು ಹೆಚ್ಚಾಗುತ್ತದೆ.
ಕಾರಿನ ರಚನೆಯಲ್ಲಿ ಇಂಜಿನಿಯರಿಂಗ್ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಇದರಿಂದ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ ಎಂಬ ಆತಂಕ ಕಂಪನಿಗಳದ್ದು.
ದೇಶದಲ್ಲಿ ನಡೆಯುವ ಕಾರು ಅಪಘಾತದಲ್ಲಿ ಸಾವು ನೋವಿನ ಲೆಕ್ಕದ ಆಧಾರದಲ್ಲೇ ನಿಯಮ ರೂಪಿಸಿರುವುದರಿಂದ ಕಾರು ಕಂಪನಿಗಳಿಗೂ ನಿಯಮ ಒಪ್ಪಿಕೊಳ್ಳುವ ಪರಿಸ್ಥಿತಿ ಇದೆ.