ನವದೆಹಲಿ : ಮಾರುತಿ ಸುಜುಕಿ ತನ್ನ ಮುಂಬರುವ ಎಲೆಕ್ಟ್ರಿಕ್ ಎಸ್ ಯುವಿಯನ್ನು ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಇವಿಎಕ್ಸ್ ಎಂಬ ಹೆಸರಿನಲ್ಲಿ ಪರಿಚಯಿಸಿದೆ. ಮಾರುತಿ ತನ್ನ ಮೊದಲ ಬಿಇವಿಯನ್ನು ಕಾಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ತನ್ನ ಇವಿಎಕ್ಸ್ ಉತ್ಪಾದನಾ ರೂಪಾಂತರಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಇವಿಎಕ್ಸ್ 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು 550 ಕಿ.ಮೀ ಸಂಭಾವ್ಯ ವ್ಯಾಪ್ತಿಯೊಂದಿಗೆ ಬರಬಹುದು. ಇದಲ್ಲದೆ, ಮಾರುತಿ ಸುಜುಕಿ ತನ್ನ ಗುಜರಾತ್ ಘಟಕದಲ್ಲಿ ಹೊಸ ಉತ್ಪಾದನಾ ಮಾರ್ಗಕ್ಕಾಗಿ 3,200 ಕೋಟಿ ರೂ.ಗಳ ಹೂಡಿಕೆಯನ್ನು ಈ ಶೃಂಗಸಭೆಯಲ್ಲಿ ಘೋಷಿಸಿದೆ.
ಇವಿಎಕ್ಸ್ ನ ಉತ್ಪಾದನಾ ರೂಪಾಂತರಗಳನ್ನು ಗುಜರಾತ್ ಘಟಕದಲ್ಲಿ ತಯಾರಿಸಲಾಗುವುದು. ಅಲ್ಲದೆ, ಇದನ್ನು ಇತರ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು ಮತ್ತು ವರ್ಷದ ಅಂತ್ಯದ ಮೊದಲು ಪರಿಚಯಿಸಲಾಗುವುದು.
ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಗ್ಲೋಬಲ್ ಸಿಇಒ ತೋಶಿಹಿರೊ ಸುಜುಕಿ ಮಾತನಾಡಿ, ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲಿದೆ. ಅಲ್ಲದೆ, ಅದರ ಹೊಸ ಉತ್ಪಾದನಾ ಘಟಕವು ಪ್ರತಿವರ್ಷ 2.5 ಲಕ್ಷ ಯುನಿಟ್ ಗಳನ್ನು ಉತ್ಪಾದಿಸುತ್ತದೆ. ಇದು ಕಂಪನಿಯ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 1 ಮಿಲಿಯನ್ ಯುನಿಟ್ ಗಳಿಗೆ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.