ಪ್ರಪಂಚದಾದ್ಯಂತ ವಾಹನಗಳ ಮಾರುಕಟ್ಟೆ ದೊಡ್ಡದಾಗಿದೆ. ಕಾರು ಪ್ರೇಮಿಗಳ ಬಳಿ ಒಂದಕ್ಕಿಂತ ಹೆಚ್ಚು ಕಾರುಗಳಿವೆ. ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಿದ್ದರೂ, ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಕೆಲ ಕಾರುಗಳು ವಿದೇಶದಿಂದ ಭಾರತಕ್ಕೆ ಬಂದ್ರೆ ಮತ್ತೆ ಕೆಲ ಕಾರುಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಹೆಚ್ಚು ಮಾರಾಟವಾಗುವ ಕಾರುಗಳ ವಿವರ ಇಲ್ಲಿದೆ.
ಮಾರುತಿ ಆಲ್ಟೊ: ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಬಗ್ಗೆ ಹೇಳೋದಾದ್ರೆ ಪಟ್ಟಿಯಲ್ಲಿ ಮಾರುತಿ ಆಲ್ಟೊ ಮುಂದಿದೆ. ಇದಕ್ಕೆ ಮುಖ್ಯ ಕಾರಣ ಕಾರಿನ ಬೆಲೆ. ಮಾರುತಿ ಆಲ್ಟೊ ಕಾರಿನ ಬೆಲೆ ಕಡಿಮೆಯಿದೆ. ಈ ಕಾರಿನ ಬೆಲೆ 3.15 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಕಾರಿನ ವೈಶಿಷ್ಟ್ಯತೆ ಮತ್ತು ಸಣ್ಣ ಗಾತ್ರ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತದೆ.
ಸುಜುಕಿ ಆಲ್ಟೊ : ಶ್ರೀಲಂಕಾದಲ್ಲಿ ಹೆಚ್ಚು ಮಾರಾಟವಾಗುವ ಕಾರು ಸುಜುಕಿ ಆಲ್ಟೊ. ಶ್ರೀಲಂಕಾದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರಿನ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿದೆ.
ಟೊಯೊಟಾ ಕೊರೊಲ್ಲಾ : ಇನ್ನು ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಟೊಯೊಟಾ ಕೊರೊಲ್ಲಾ ಕಾರು ಅತಿ ಹೆಚ್ಚು ಮಾರಾಟವಾಗಿದೆ. ಟೊಯೋಟಾ ಜಪಾನಿನ ಕಂಪನಿಯಾಗಿದೆ. ಟೊಯೊಟಾ ಕೊರೊಲ್ಲಾ ಬೆಲೆ 14.83 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.
ವೋಕ್ಸ್ ವ್ಯಾಗನ್ ಲಾವಿಡಾ : ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ವೋಕ್ಸ್ ವ್ಯಾಗನ್ ಲಾವಿಡಾ. ಇದನ್ನು ಜರ್ಮನ್ ಕಂಪನಿ ವೋಕ್ಸ್ ವ್ಯಾಗನ್ ತಯಾರಿಸುತ್ತದೆ.
ಲಾಡಾ ಗ್ರಾಂಟಾ : ರಷ್ಯಾದಲ್ಲಿ ಹೆಚ್ಚು ಮಾರಾಟವಾಗುವ ಕಾರು ಲಾಡಾ ಗ್ರಾಂಟಾ. ಇದನ್ನು ರಷ್ಯಾದ ವಾಹನ ತಯಾರಕರಾದ AvtoVAZ ತಯಾರಿಸುತ್ತದೆ.
ಫೋರ್ಡ್ ಎಫ್-150 : ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಫೋರ್ಡ್ ಎಫ್-150 ಕಾರು ಹೆಚ್ಚು ಮಾರಾಟವಾಗುತ್ತದೆ. ಅಮೆರಿಕಾದಲ್ಲಿಯೇ ಇದು ತಯಾರಾಗುತ್ತದೆ. ಫೋರ್ಡ್ ಅನೇಕ ವಾಹನಗಳಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದಲ್ಲದೇ, ಫೋರ್ಡ್‌ನ ಎಫ್ ಸರಣಿಯ ಕಾರುಗಳು ಕೆನಡಾದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ಅದೇ ಸಮಯದಲ್ಲಿ, ಫೋರ್ಡ್ ಫಿಯೆಸ್ಟಾ ಯುಕೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತದೆ.