ವಿವಾಹಿತ ಮಹಿಳೆಯೊಬ್ಬರು ತನ್ನ ಪ್ರಿಯಕರನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಜಾರ್ಖಂಡ್ ನ ರಾಮ್ಘರ್ ನಲ್ಲಿ ನಡೆದಿದೆ. ಮಮತಾದೇವಿ ಹತ್ಯೆಯಾದ ಮಹಿಳೆಯಾಗಿದ್ದು, ಈಕೆಯ ಪ್ರಿಯಕರ ಅರ್ಮಾನ್ ಖಾನ್ ಈ ಕೃತ್ಯ ಎಸಗಿದ್ದಾನೆ ಎಂದು ಮೃತಳ ಸಹೋದರಿ ಆರೋಪಿಸಿದ್ದಾರೆ.
ಮಮತಾ ದೇವಿ ರಂಜನ್ ಕಸೇರ ಎಂಬಾತನೊಂದಿಗೆ ವಿವಾಹವಾಗಿದ್ದು, ರಾಮ್ ಗರ್ ಜಿಲ್ಲೆಯ ಓ ಪಿ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಆಕೆಗೆ ಹಜಾರಿಬಾಗ್ ನಿವಾಸಿ ಅರ್ಮಾನ್ ಖಾನ್ ಪರಿಚಯವಾಗಿದೆ. ಇಬ್ಬರು ಅಕ್ರಮ ಸಂಬಂಧ ಹೊಂದಿದ್ದು, ಆಗಾಗ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.
ಶನಿವಾರದಂದು ಮಮತಾ ದೇವಿಯ ಸಹೋದರಿ ಜಯಾದೇವಿ ತನ್ನ ಪತಿಯೊಂದಿಗೆ ಆಕೆಯ ಮನೆಗೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಮಮತಾ ದೇವಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಅರ್ಮಾನ್ ಖಾನ್ ಪತ್ತೆಗೆ ಬಲೆ ಬೀಸಿದ್ದಾರೆ.