ಮುಂಬೈ: ಮನೆ ಕೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ ಎಂದು ಹೇಳಿದ ಬಾಂಬೆ ಹೈಕೋರ್ಟ್ ಔರಂಗಬಾದ್ ಪೀಠ ವಿವಾಹಿತೆ ಆರೋಪ ತಳ್ಳಿ ಹಾಕಿ ಪತಿ ವಿರುದ್ಧದ ಎಫ್ಐಆರ್ ರದ್ದುಪಡಿಸಿದೆ.
ಮನೆ ಕೆಲಸ ಮಾಡು ಎಂದು ಹೇಳುವುದು ಮಹಿಳೆಯಯನ್ನು ಮನೆ ಕೆಲಸದವರಿಗೆ ಹೋಲಿಸಿದಂತೆ ಅಲ್ಲ. ಸೇವಕಿಯಂತೆ ಅಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಗಂಡ ಹಾಗೂ ಆತನ ಪೋಷಕರ ವಿರುದ್ಧ ಮಹಿಳೆ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದು, ಎಫ್ಐಆರ್ ದಾಖಲಾಗಿತ್ತು. ನ್ಯಾಯಮೂರ್ತಿಗಳಾದ ವಿಭಾ ಕಂಕನವಾಡಿ, ರಾಜೇಶ್ ಪಾಟೀಲ್ ಅವರು ಎಫ್ಐಆರ್ ರದ್ದು ಮಾಡಿದ್ದಾರೆ.
ಮದುವೆಯಾದ ಒಂದು ತಿಂಗಳವರೆಗೆ ಗಂಡನ ಮನೆಯವರೆಲ್ಲರೂ ಚೆನ್ನಾಗಿ ನೋಡಿಕೊಂಡರು. ನಂತರ ಮನೆ ಕೆಲಸದವರ ರೀತಿ ಕಾಣುತ್ತಿದ್ದರು. ಕಾರ್ ಖರೀದಿಗೆ 4 ಲಕ್ಷ ಕೊಡುವಂತೆ ಒತ್ತಾಯಿಸಿದರು. ಪತಿ ಹಣ ಕೊಡುವಂತೆ ದೈಹಿಕ, ಮಾನಸಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ದೂರಿದ್ದರು.
ಪ್ರಸ್ತುತ ಮಹಿಳೆ ಗಂಡನಿಂದ ದೂರವಾಗಿ ವಾಸಿಸುತ್ತಿದ್ದಾಳೆ. ದೂರಿನಲ್ಲಿ ದೌರ್ಜನ್ಯವಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ಯಾವ ರೀತಿಯ ದೌರ್ಜನ್ಯ ನಡೆದಿದೆ ಎಂದು ವಿವರಿಸಿಲ್ಲ. ಗಂಡನ ವಿರುದ್ಧ ಮಹಿಳೆ ಮಾಡಿರುವ ಆರೋಪ ಸೆಕ್ಷನ್ 498 ಎ ಅಡಿ ಬರುವುದಿಲ್ಲ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟು, ಎಫ್ಐಆರ್ ರದ್ದು ಮಾಡುವಂತೆ ಸೂಚಿಸಿದೆ.
ಮನೆ ಕೆಲಸ ಮಾಡುವ ಇಷ್ಟವಿಲ್ಲದಿದ್ದರೆ ಮದುವೆಗೆ ಮೊದಲೇ ತಿಳಿಸಬೇಕಿತ್ತು. ಆಗ ಮದುವೆಯ ಬಗ್ಗೆ ಹುಡುಗ ಮತ್ತು ಆತನ ಮನೆಯವರು ಯೋಚಿಸುತ್ತಿದ್ದರು. ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಂದು ಹೇಳಿದರೆ ಸಾಲದು ಯಾವ ರೀತಿಯ ದೌರ್ಜನ್ಯ ನಡೆದಿದೆ ಎಂಬುದನ್ನು ವಿವರಿಸಬೇಕು. ಮಹಿಳೆ ಹೇಳುವ ರೀತಿ ದೌರ್ಜನ್ಯ ನಡೆದಿದೆ ಎಂದು ವಿವರಿಸದಿದ್ದರೆ ಪತಿ ನಡೆಸಿದ ಕ್ರಿಯೆ ದೌರ್ಜನ್ಯ ಹೌದೋ ಅಲ್ಲವೋ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗದು. ತನ್ನ ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ಹೇಳುವುದು ಕ್ರೌರ್ಯವಲ್ಲ ಮತ್ತು ಮನೆಗೆಲಸದವರಿಗೆ ಹೋಲಿಕೆ ಮಾಡಿದಂತೆ ಅಲ್ಲ ಎಂದು ನ್ಯಾಯಪೀಠ ಹೇಳಿದೆ.