ಚೆನ್ನೈ: ತನ್ನ ಅಪ್ರಾಪ್ತ ಮಗಳಿಗೆ ತನ್ನ ಗೆಳೆಯ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಚೆನ್ನೈನಲ್ಲಿ 36 ವರ್ಷದ ಮಹಿಳೆಯನ್ನು ಪೋಕ್ಸೋ ಅಡಿಯಲ್ಲಿ ಬಂಧಿಸಲಾಗಿದೆ.
ಚೆನ್ನೈನ ಟಿಪಿ ಛತ್ರಂ ಮೂಲದ ಅಭಿರಾಮಿ ಬಂಧಿತ ಮಹಿಳೆ. 2017 ರಿಂದ ಪತಿಯಿಂದ ದೂರವಾದ ಮಹಿಳೆ ಅದೇ ಪ್ರದೇಶದ 39 ವರ್ಷದ ಜಾರ್ಜ್ ಫರ್ನಾಂಡಿಸ್ ಜೊತೆ ಸಂಬಂಧ ಹೊಂದಿದ್ದಳು. ಶಾಲೆಗೆ ಹೋಗುವ ತನ್ನ ಮಗಳು ಮತ್ತು ಮಗನೊಂದಿಗೆ ಪ್ರಿಯಕರನ ಜೊತೆ ವಾಸಿಸುತ್ತಿದ್ದಳು.
ಆದರೆ, ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಂತಹ ಒಂದು ಜಗಳದ ನಂತರ, ಅಭಿರಾಮಿ 2018 ರಲ್ಲಿ ಫರ್ನಾಂಡಿಸ್ ವಿರುದ್ಧ ಕಿಲ್ಪಾಕ್ ಪೊಲೀಸ್ ಠಾಣೆಯಲ್ಲಿ ತನ್ನ ಅಪ್ರಾಪ್ತ ಮಗಳನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದ್ದಾಳೆ. ಪೋಕ್ಸೋ ಅಡಿಯಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಕೋರಿ ಪೊಲೀಸ್ ಠಾಣೆಯ ಹೊರಗೆ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ, ಫರ್ನಾಂಡಿಸ್ ವಿರುದ್ಧ ಪೋಕ್ಸೊ ಕಾಯ್ದೆ ಸೇರಿದಂತೆ ಮೂರು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗೆ ಕಳಿಸಲಾಗಿದೆ.
2019 ರಲ್ಲಿ ಜಾರ್ಜ್ ಫರ್ನಾಂಡಿಸ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಂತರ ಅಭಿರಾಮಿ ಮತ್ತು ಜಾರ್ಜ್ ಫರ್ನಾಂಡಿಸ್ ಮತ್ತೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಮತ್ತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ. ಮಾರ್ಚ್ 7 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ಬಂದ ನಂತರ, ಅಭಿರಾಮಿ ತನ್ನ ಪ್ರಿಯಕರನನ್ನು ರಕ್ಷಿಸಲು ನ್ಯಾಯಾಲಯಕ್ಕೆ ಹಾಜರಾಗಿ ಸುಳ್ಳು ದೂರು ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಸುಳ್ಳು ಲೈಂಗಿಕ ಕಿರುಕುಳದ ದೂರು ನೀಡಿ ಅಪ್ರಾಪ್ತ ಬಾಲಕಿಯನ್ನು ಬಲಿಪಶು ಮಾಡಿದ್ದಕ್ಕಾಗಿ ಪೋಕ್ಸೋ ಅಡಿಯಲ್ಲಿ ಬಂಧಿಸಲು ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಕಿಲ್ಪಾಕ್ ಎಲ್ಲಾ ಮಹಿಳಾ ಪೊಲೀಸರು ಅಭಿರಾಮಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.