ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವತಿಯನ್ನು ಹತ್ಯೆ ಮಾಡಲಾಗಿದೆ. ಗಂಡನ ಮನೆಯವರು ಸೊಸೆ ದಲಿತಳೆಂದು ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದು, ಗಂಗಾವತಿ ತಾಲೂಕಿನ ವಿಠಲಾಪುರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಗೋಲಿ ಗ್ರಾಮದ ಮರಿಯಮ್ಮ(21) ಮೃತ ಯುವತಿ. ವಿಠಲಾಪುರದಲ್ಲಿರುವ ಅಜ್ಜಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಮರಿಯಮ್ಮನಿಗೆ ಅದೇ ಗ್ರಾಮದ ನಾಯಕ ಸಮುದಾಯದ ಯುವಕ ಹನುಮಯ್ಯನ ಪರಿಚಯವಾಗಿದೆ. ಎರಡು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಕುಟುಂಬದವರನ್ನು ಒಪ್ಪಿಸಿ 2023ರ ಏಪ್ರಿಲ್ ನಲ್ಲಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು.
ಮದುವೆಗೆ ಒಪ್ಪಿದ್ದ ಯುವಕನ ಕುಟುಂಬದವರು ಮನೆಗೆ ಮರಿಯಮ್ಮ ಅವರನ್ನು ಸೇರಿಸಿಕೊಳ್ಳದೆ ಬೇರೆ ಶೆಡ್ ನಲ್ಲಿ ವಾಸವಾಗಿರಲು ಸೂಚಿಸಿದ್ದರು. ಆಕೆ ಮಾಡಿದ ಅಡುಗೆಯನ್ನು ತಿನ್ನುತ್ತಿರಲಿಲ್ಲ. ಕುಟುಂಬದಿಂದ ದೂರ ಇಟ್ಟು ಹಿಂಸೆ ನೀಡುತ್ತಿದ್ದರು. ಆಗಸ್ಟ್ 29ರಂದು ಮರಿಯಮ್ಮಳನ್ನು ಮನಬಂದಂತೆ ಥತಿಳಿಸಿ ಅನುಮಾನ ಬಾರದಂತೆ ವಿಷ ಉಣ್ಣಿಸಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಹನುಮಯ್ಯನ ಕುಟುಂಬದ 13 ಮಂದಿ ವಿರುದ್ಧ ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.