ಉಡುಪಿ: ಮದುವೆ ನಿಶ್ಚಯವಾಗಿದ್ದ ಯುವಕ ನಾಪತ್ತೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಟೇಶ್ವರ ಗ್ರಾಮದ ಯುವತಿ ಹಾಗೂ ಕಾರ್ತಿಕ್(28) ಎಂಬ ಯುವಕನ ಮದುವೆ ಮಾತುಕತೆಯಾಗಿದ್ದು, ಡಿಸೆಂಬರ್ 5ರಂದು ಮದುವೆಗೆ ನಿಶ್ಚಯ ಮಾಡಿಕೊಳ್ಳಲಾಗಿತ್ತು. ಜುಲೈ 16ರಂದು ಇವರು ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ನವೆಂಬರ್ 27ರಂದು ಮಧ್ಯಾಹ್ನ ಕಾರ್ತಿಕ್ ಯುವತಿಗೆ ಕರೆ ಮಾಡಿ ತಾನು ಕೋಟೇಶ್ವರದಲ್ಲಿದ್ದು, ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದಾನೆ. ನಂತರ ವಾಪಸ್ ಬಾರದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಯುವಕ ನಾಪತ್ತೆಯಾದ ಬಗ್ಗೆ ಯುವತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.