ವರ್ಷ ಮೂವತ್ತಾಯಿತು ಎಂದಾಕ್ಷಣ ‘ಇನ್ನು ಮದುವೆಯಾಗಿಲ್ವಾ’ ಎಂಬ ಮಾತು ಕೇಳಿ ಬರುತ್ತದೆ. ಮೂವತ್ತರೊಳಗೆ ಮದುವೆಯಾಗಿ ಬೇಗ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ಇಂದಿನ ಯುವಪೀಳಿಗೆಯವರು ಇಷ್ಟು ಬೇಗ ಮದುವೆಯಾದರೆ ಕೆರಿಯರ್ ಗತಿ ಏನು ಎಂದು ಕೇಳುತ್ತಾರೆ.
ಆಯಾಯ ವಯಸ್ಸಿಗೆ ನಡೆಯಬೇಕಾದ್ದು ನಡೆದರೆ ಚೆಂದ ಎಂದು ಮನೆಯಲ್ಲಿ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಈ ಆಧುನಿಕ ಯುಗದಲ್ಲಿ ಜೀವನ, ಗೋಲ್, ಕೆರಿಯರ್ ಎಂದು ಯುವಜನತೆ ಮದುವೆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಹಾಗೇ ಮದುವೆಯಾದರೆ ಏನನ್ನೂ ಸಾಧಿಸೋಕೆ ಆಗುವುದಿಲ್ಲ. ಮನೆ, ಸಂಸಾರ, ಮಕ್ಕಳು, ಎಂದು ನಮ್ಮ ಜೀವನವನ್ನು ಖುಷಿಯಿಂದ ಅನುಭವಿಸೋಕೆ ಆಗಲ್ಲ ಎನ್ನುತ್ತಾರೆ.
ಇನ್ನು ಕೆಲವರು ಯಾಕಾದ್ರೂ ಇಷ್ಟ ಬೇಗ ಮದುವೆಯಾದ್ವೋ ಸ್ವಲ್ಪ ಸಮಯ ಜೀವನವನ್ನು ಖುಷಿಯಿಂದ ನಮ್ಮಿಷ್ಟ ಬಂದ ಹಾಗೇ ಕಳೆಯಬೇಕಿತ್ತು ಎಂದು ಕೊರಗುತ್ತಿರುತ್ತಾರೆ. ಆದರೆ ಖುಷಿಯಿಂದ ಬದುಕುವುದನ್ನು ಕಲಿತರೆ ಮದುವೆಯೆನ್ನುವುದು ಒಂದು ತಡೆ ಅಲ್ಲ ಅದು ಭಾಂದವ್ಯವನ್ನು ವೃದ್ಧಿಸುವ ಕೊಂಡಿ ಎನ್ನುವುದು ಅರಿವಾಗುತ್ತದೆ.
ತಮ್ಮದೇ ಆದ ಕುಟುಂಬವೊಂದು ಎಲ್ಲರಿಗೂ ಬೇಕಿರುತ್ತದೆ. ಅದು ನಾವು ಸೋತಾಗ ಕೈಹಿಡಿಯುತ್ತದೆ, ಗೆದ್ದಾಗ ನಮ್ಮ ಜತೆ ಸಂತೋಷದಲ್ಲಿ ಭಾಗಿಯಾಗುತ್ತದೆ. ಅದು ಅಲ್ಲದೇ ಈಗಿನ ಆಹಾರ ಪದ್ಧತಿ, ಜೀವನಶೈಲಿಯಿಂದ ಮೂವತ್ತರ ನಂತರ ಮದುವೆಯಾದರೆ ಮಹಿಳೆಯರು ಗರ್ಭಧರಿಸುವುದು ಸ್ವಲ್ಪ ಕಷ್ಟವಾಗುತ್ತದೆ ಹಾಗೂ ಆರೋಗ್ಯಕ್ಕೆ ಕುರಿತಾದ ಇತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮದುವೆ ಎನ್ನುವುದನ್ನು ಯಾವತ್ತೂ ಸಂಕೋಲೆ ಎಂದುಕೊಳ್ಳಬೇಡಿ. ಜೀವನವನ್ನು ಎದುರಿಸುವ ಧೈರ್ಯವಿರಲಿ.