
ಮೀರತ್: ವರ ದಲಿತ ಎಂದು ಮದುವೆ ನಿಗದಿಯಾಗಿದ್ದ ಕಲ್ಯಾಣ ಮಂಟಪದ ಬುಕಿಂಗ್ ಅನ್ನೇ ಮಾಲೀಕ ಕ್ಯಾನ್ಸಲ್ ಮಾಡಿದ್ದಾನೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದೆ.
ವರ ದಲಿತ ಎಂದು ತಿಳಿದು ರಿಸರ್ವೇಷನ್ ರದ್ದುಪಡಿಸಿದ ಆರೋಪದ ಮೇಲೆ ಮದುವೆ ಮಂಟಪದ ಮಾಲೀಕನ ಮೇಲೆ ದೂರು ದಾಖಲಾಗಿದೆ. ಸಭಾಂಗಣದ ಮಾಲೀಕ ರಯೀಸ್ ಅಬ್ಬಾಸಿ ಅವರು ಆರೋಪ ನಿರಾಕರಿಸಿದ್ದಾರೆ. ನಿಗದಿತ ಆದರೆ ಸ್ಥಳದಲ್ಲಿಯೇ ಮದುವೆ ನಡೆಯಲಿದೆ ಎಂದು ಪೊಲೀಸರು ಕುಟುಂಬಕ್ಕೆ ಭರವಸೆ ನೀಡಿದರು.
ವಲಯದ ಸರ್ಕಲ್ ಅಧಿಕಾರಿ ರುಚಿತಾ ಚೌಧರಿ ಮಾತನಾಡಿ, ಸ್ಥಳೀಯ ನಿವಾಸಿ ಜೈದೀಪ್ ಎಂಬುವರು ಏಪ್ರಿಲ್ 9 ರಂದು ನಿಗದಿಯಾಗಿದ್ದ ಅವರ ಸಹೋದರಿಯ ಮದುವೆಗೆ ರಯೀಸ್ ಅಬ್ಬಾಸಿ ಮಾಲೀಕತ್ವದ ಹಾಲ್ ಬುಕ್ ಮಾಡಿದ್ದರು. ವರ ವಾಲ್ಮೀಕಿ(ಪರಿಶಿಷ್ಟ ಜಾತಿ ಸಮುದಾಯ) ಎಂದು ತಿಳಿದ ಅಬ್ಬಾಸಿ ಅವರು ರಿಸರ್ವೇಷನ್ ರದ್ದುಗೊಳಿಸಿದ್ದು, ಬೇರೆ ಸ್ಥಳ ಹುಡುಕಬೇಕು ಎಂದು ತಿಳಿಸಿದ್ದರು ಎಂದು ಜೈದೀಪ್ ದೂರಿನಲ್ಲಿ ತಿಳಿಸಿದ್ದಾರೆ.
ಚೌಧರಿ ಪ್ರಕಾರ, ಅಬ್ಬಾಸಿ ವಿರುದ್ಧ ಖಾರ್ ಖೌಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದೇ ಸ್ಥಳದಲ್ಲಿ ಮದುವೆ ನಡೆಯಲಿದೆ ಎಂದು ಜೈದೀಪ್ ಅವರ ಕುಟುಂಬ ಸದಸ್ಯರಿಗೆ ನಾವು ಭರವಸೆ ನೀಡಿದ್ದೇವೆ, ನಾವು ಮದುವೆ ಮಂಟಪದ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾನು ಸ್ಥಳದಲ್ಲಿ ಮಾಂಸಾಹಾರಿ ಅಡುಗೆ ಮಾಡುವುದನ್ನು ಮಾತ್ರ ವಿರೋಧಿಸಿದ್ದೇನೆ. ನಾನು ಯಾರೊಂದಿಗೂ ಯಾವುದೇ ಜಾತಿಗೆ ಸಂಬಂಧಿಸಿದ ವಿಷಯವನ್ನು ಹೇಳಿಲ್ಲ. ಅಥವಾ ಬುಕ್ಕಿಂಗ್ ಅನ್ನು ರದ್ದುಗೊಳಿಸಿಲ್ಲ ಎಂದು ಅಬ್ಬಾಸಿ ಅವರು ತಿಳಿಸಿದ್ದಾರೆ.