
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಕಲ್ಯಾಣಮಂಟಪದಿಂದಲೇ ವಧು ಪರಾರಿಯಾದ ಘಟನೆ ನಡೆದಿದೆ.
ಗುಡಿಬಂಡೆ ತಾಲ್ಲೂಕಿನ ಆಪಿರೆಡ್ಡಿಹಳ್ಳಿಯ ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ವರನ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ರಾಜಿಸಂಧಾನ ವಿಫಲವಾಗಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.
ಗೌರಿಬಿದನೂರಿನ ನಾಗಯ್ಯರೆಡ್ಡಿ ಬಡಾವಣೆಯ 22 ವರ್ಷದ ಯುವತಿ ಮದುವೆ ಕರೇಕಲ್ಲಹಳ್ಳಿ ಯುವಕನೊಂದಿಗೆ ನಿಶ್ಚಯವಾಗಿತ್ತು. ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮ ಮನೆಮಾಡಿತ್ತು. ಬಂಧು ಬಾಂಧವರೆಲ್ಲರೂ ಮದುವೆಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಆರತಕ್ಷತೆ ನಡೆದಿದ್ದು, ಬುಧವಾರ ಬೆಳಗ್ಗೆ ಮುಹೂರ್ತ ನಡೆಯಬೇಕಿತ್ತು. ಈ ನಡುವೆ ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದು, ಕಲ್ಯಾಣ ಮಂಟಪದಲ್ಲಿ ಗಲಾಟೆಯಾಗಿ ಪೊಲೀಸರಿಗೆ ದೂರು ನೀಡಲಾಗಿದೆ.