ಶಿವಮೊಗ್ಗ: ಮದುವೆಯಾದ 4 ದಿನದಲ್ಲೇ ಕೊರೋನಾ ಸೋಂಕಿನಿಂದ ಯುವತಿ ಸಾವು ಕಂಡ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ.
ಮಲವಗೊಪ್ಪದ ಪೂಜಾ ಮೃತಪಟ್ಟವರು ಎಂದು ಹೇಳಲಾಗಿದೆ. ಮೇ 24 ರಂದು ಹರಿಗೆಯ ಮಹೇಶ್ ಜೊತೆಗೆ ಪೂಜಾ ಮದುವೆಯಾಗಿತ್ತು. ಮದುವೆಯಾದ ಮರು ದಿನದಿಂದಲೇ ಜ್ವರ ಕಾಣಿಸಿಕೊಂಡಿದೆ. ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಕೊಂಡಿದ್ದ ಪೂಜಾ ಅವರಿಗೆ ಜ್ವರ ಜಾಸ್ತಿಯಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ನವವಿವಾಹಿತೆ ನಿಧನದಿಂದಾಗಿ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.