ಬೆಂಗಳೂರು: ಮದುವೆಯಾಗುವುದಾಗಿ 18 ವರ್ಷದ ಹಿಂದೂ ಯುವತಿಯನ್ನು ನಂಬಿಸಿ ಇಸ್ಲಾಂ ಧರ್ಮಕ್ಕೆ ಮದಾಂತರ ಮಾಡಿದ್ದ ಯುವಕನ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಸೈಯದ್ ಮೋಹಿನ್(23) ಎಂಬುವನ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧಿಸಿದ್ದಾರೆ.
ಬಿಕೆ ನಗರದಲ್ಲಿ ಉತ್ತರ ಪ್ರದೇಶ ಮೂಲದ ದಂಪತಿ ವಾಸವಾಗಿದ್ದು, ಅವರ ಪುತ್ರಿಯಾಗಿರುವ ಯುವತಿ ಅದೇ ಬಡಾವಣೆಯಲ್ಲಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೋಹಿನ್ ನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಗೊತ್ತಾದ ಯುವತಿಯ ಪೋಷಕರು ಬುದ್ಧಿವಾದ ಹೇಳಿದ್ದರು. ಅ. 5 ರಂದು ಅಂಗಡಿಗೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆಯಾಗಿದ್ದಳು.
ಹುಡುಕಾಟ ನಡೆಸಿದ್ದ ಪೋಷಕರು ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅ. 8 ರಂದು ಯಶವಂತಪುರ ಠಾಣೆಗೆ ಯುವಕ ಹಾಗೂ ಯುವತಿ ಆಗಮಿಸಿದ್ದಾರೆ. ಯುವತಿ ಬುರ್ಖಾ ಧರಿಸಿರುವುದನ್ನು ಕಂಡ ಪೋಷಕರು ಶಾಕ್ ಆಗಿದ್ದಾರೆ. ವಿಚಾರಣೆ ನಡೆಸಿದಾಗ ಮದುವೆ ಆಮಿಷವೊಡ್ಡಿ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಇನ್ನು ಮದುವೆಯಾಗಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ.
ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಮತಾಂತರವಾಗುವ ವ್ಯಕ್ತಿ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲನೆಗೆ 30 ದಿನ ಕಾಲಾವಕಾಶವಿದ್ದು ಆಮಿಷಕ್ಕೆ ಬಲಿಯಾಗಿಲ್ಲ, ಒತ್ತಡಕ್ಕೆ ಒಳಗಾಗಿಲ್ಲ ಎನ್ನುವುದನ್ನು ದೃಢೀಕರಿಸಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೇ ನಿಯಮ ಪಾಲನೆಯಾಗಿಲ್ಲ. ಮತಾಂತರ ನಿಷೇಧ ಕಾಯ್ದೆ ಎನ್ನುವ ಪ್ರಕರಣ ದಾಖಲಿಸಿ ಮೋಹಿನ್ ನನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.