![Happy birthday Salman Khan: Did you know this actor is the reason he never got married? | Bollywood - Hindustan Times](https://images.hindustantimes.com/rf/image_size_630x354/HT/p2/2020/12/26/Pictures/_3d5e491a-4795-11eb-b4f2-1df98d963a79.jpg)
ಖ್ಯಾತ ನಟ ಸಲ್ಮಾನ್ ಖಾನ್ ಬಾಲಿವುಡ್ ಚಿತ್ರರಂಗದ ʼಮೋಸ್ಟ್ ಎಲಿಜಿಬಲ್ ಬ್ಯಾಚುಲರ್ʼ ಎಂದೇ ಹೆಸರುವಾಸಿ. ವಯಸ್ಸು 50 ರ ಮೇಲಾದರೂ ಸಲ್ಮಾನ್ ಖಾನ್ ಈವರೆಗೂ ಮದುವೆಯಾಗದಿರುವುದೇ ಇದಕ್ಕೆ ಕಾರಣ. ಈ ಹಿಂದೆ ಸಲ್ಮಾನ್ ಹೆಸರು ಹಲವು ನಟಿಯರ ಜೊತೆ ಕೇಳಿ ಬಂದಿದ್ದರೂ ಸಹ ಅವರಿಗೆ ಈವರೆಗೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ.
ಸಲ್ಮಾನ್ ಮದುವೆಯಾಗುತ್ತಿದ್ದಾರೆ ಎಂದು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಸಹ ಅದು ಕೈಗೂಡಿಲ್ಲ. ಇದರ ಮಧ್ಯೆ ತಮ್ಮ ಮೊದಲ ಪತ್ನಿ ಮಲೈಕಾ ಅರೋರ ಜೊತೆ ವಿಚ್ಛೇದನ ಪಡೆದಿದ್ದ ಸಲ್ಮಾನ್ ಸಹೋದರ ಅರ್ಬಾಜ್ ಖಾನ್, ಎರಡು ದಿನಗಳ ಹಿಂದಷ್ಟೇ ಮತ್ತೊಂದು ಮದುವೆಯಾಗಿದ್ದಾರೆ. ಆದರೆ ಸಲ್ಮಾನ್ ಖಾನ್ ಮಾತ್ರ ಈವರೆಗೂ ವಿವಾಹವಾಗುವ ಗೋಜಿಗೆ ಹೋಗಿಲ್ಲ.
ಇದರ ಮಧ್ಯೆ ಮಂಗಳೂರಿನ ಮ್ಯಾರೇಜ್ ಬ್ಯೂರೋ ಒಂದು, ವಿಶಿಷ್ಟ ರೀತಿಯಲ್ಲಿ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಉರ್ವದಲ್ಲಿರುವ ಸುಮಂಗಳ ಮ್ಯಾರೇಜ್ ಬ್ಯೂರೋ ಈ ಜಾಹೀರಾತು ನೀಡಿದ್ದು, ಇದರಲ್ಲಿ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಶುಭ ಕೋರುವುದರ ಜೊತೆಗೆ ತಮ್ಮ ಸುಮಂಗಳ ಮ್ಯಾರೇಜ್ ಬ್ಯೂರೋ ಕೆಳಗಡೆ ಶೀಘ್ರ ವಿವಾಹಕ್ಕಾಗಿ ಸಂಪರ್ಕಿಸಿ ಎಂದು ಹಾಕಿಕೊಂಡಿದೆ.
ಈ ಜಾಹೀರಾತನ್ನು ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಮ್ಯಾರೇಜ್ ಬ್ಯೂರೋ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಿದ್ದಾರೆ.
![](https://kannadadunia.com/wp-content/uploads/2023/12/5f9ce87d-7c82-4859-bc49-731382a39225-400x485.jpg)