ನವದೆಹಲಿ: ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯ ಶಿಫಾರಸು ಆಧರಿಸಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಪ್ರಧಾನಿ ಕಾರ್ಯಾಲಯಕ್ಕೆ ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿ ವರದಿ ಸಲ್ಲಿಸಿದೆ. ವಿವಾಹ ವಯೋಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ಏರಿಕೆ ಮಾಡುವ ಕುರಿತು ಕಳೆದ ವರ್ಷ ಕೇಂದ್ರ ಸರ್ಕಾರ ಜಯಾ ಜೇಟ್ಲಿ ನೇತೃತ್ವದಲ್ಲಿ 10 ಮಂದಿ ಸದಸ್ಯರ ಕಾರ್ಯಪಡೆ ರಚಿಸಿದ್ದು, ಮದುವೆ ವಯಸ್ಸು ಸೇರಿದಂತೆ ಹೊಸ ಕಾನೂನು ಅಥವಾ ಕಾನೂನು ತಿದ್ದುಪಡಿ ಬಗ್ಗೆ ಮಾಹಿತಿ ನೀಡಲು ತಿಳಿಸಲಾಗಿತ್ತು. ಹೆಣ್ಣುಮಕ್ಕಳ ಮದುವೆ, ತಾಯ್ತನಕ್ಕೆ ಅಗತ್ಯವಾದ ಆರೋಗ್ಯ, ಶಿಶು ಮರಣ ದರ, ಗರ್ಭಿಣಿಯರ ಮರಣ ದರ, ಲಿಂಗಾನುಪಾತ ಮೊದಲಾದವುಗಳನ್ನು ಪರಿಗಣಿಸಿ ಸಮಿತಿ ವರದಿ ನೀಡಿದೆ ಎಂದು ಹೇಳಲಾಗಿದೆ.