ಕೋವಿಡ್ ಸಾಂಕ್ರಮಿಕದ ಸಂಕಷ್ಟಗಳ ನಡುವೆ ಮೊದಲೇ ಸಂಸಾರ ಸಾಗಿಸಲು ಕಷ್ಟಪಡುತ್ತಿರುವ ಜನಸಾಮಾನ್ಯರಿಗೆ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಿರುವುದು ಇನ್ನೂ ದೊಡ್ಡ ತಲೆನೋವಾಗಿದೆ.
ಇದೇ ವಿಚಾರದ ಬಗ್ಗೆ ಮಾತನಾಡಿ ಪರಿಹಾರ ಕೇಳಲು ಶಿಕ್ಷಣ ಸಚಿವರ ಬಳಿಗೆ ಶಾಲಾ ಮಕ್ಕಳ ತಂದೆಯೊಬ್ಬರು ಹೋಗಿದ್ದಾರೆ. ಮಧ್ಯ ಪ್ರದೇಶ ಶಿಕ್ಷಣ ಸಚಿವ ಇಂದರ್ ಸೀಂಗ್ ಪರ್ಮಾರ್‌ರ ಬಂಗಲೆ ಬಳಿ ಬಂದಿದ್ದ ಈ ಬಡಪಾಯಿ ತಂದೆ ಈ ಸಾಂಕ್ರಮಿಕ ಕಾಲಘಟ್ಟದಲ್ಲಿ ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಮನ್ನಾ ಮಾಡಲು ಬೇಡಿಕೊಂಡಿದ್ದಾರೆ.
ಇಷ್ಟೊಂದು ದುಬಾರಿ ಶುಲ್ಕ ಕಟ್ಟಲಾಗದ ನಾವು ಸಾಯಬೇಕೇ ಎಂದು ನೋವಿನಿಂದ ಪೋಷಕ ತಮ್ಮ ಬಳಿ ಕೇಳಿದಾಗ ದುರಹಂಕಾರದಿಂದ ಉತ್ತರಿಸಿದ ಸಚಿವರು, “ಸಾಯುವುದಾದರೆ ಹೋಗಿ ಸಾಯಿ, ಹೋಗಿ ಆಂದೋಲನ ಮಾಡು” ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಸರ್ಕಾರದ ನಿದೇರ್ಶನಗಳು ಹಾಗೂ ಹೈಕೋರ್ಟ್ ಆದೇಶವನ್ನೂ ಉಲ್ಲಂಘನೆ ಮಾಡುತ್ತಿರುವ ಕೆಲವೊಂದು ಶಾಲೆಗಳು ಮಿತಿ ಮೀರಿ ಶುಲ್ಕ ವಿಧಿಸುತ್ತಿವೆ ಎಂದು ದೂರು ಕೊಡಲು ಸಚಿವರ ಬಳಿ 60ಕ್ಕೂ ಹೆಚ್ಚು ಪೋಷಕರು ಈ ವೇಳೆ ಬಂದಿದ್ದರು.