ಬೆಂಗಳೂರು: ಕೊರೋನಾ ಕಾರಣದಿಂದಾಗಿ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಎರಡು ದಿನದಲ್ಲಿ ಆರು ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಕನ್ನಡ ಸೇರಿದಂತೆ ಪ್ರಥಮ ಭಾಷೆ ವಿಷಯಗಳ ಗರಿಷ್ಠ ಅಂಕಗಳನ್ನು 125 ಅಂಕಗಳಿಗೆ(25 ಆಂತರಿಕ ಅಂಕಗಳು ಸೇರಿ) ನಿಗದಿ ಮಾಡಲಾಗಿದೆ.
ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪ್ರತಿ ವಿಷಯಕ್ಕೆ 40 ಅಂಕಗಳು ಮುಂದುವರೆಯಲಿದೆ. ಮೊದಲು ಎಲ್ಲ ವಿಷಯಗಳಿಗೆ 40 ಅಂಕಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗಿದ್ದು, ಪ್ರಥಮ ಭಾಷೆಗೆ 125 ಅಂಕಗಳಿಗೆ ನಿಗದಿ ಮಾಡಿ ಫಲಿತಾಂಶ ಪ್ರಕಟಿಸಲು ಪ್ರೌಢ ಶಿಕ್ಷಣ ಮಂಡಳಿ ಕ್ರಮಕೈಗೊಂಡಿದೆ.
ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗೆ 40 ಅಂಕದ 125 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಪ್ರತಿ ವಿಷಯಕ್ಕೆ 40 ಅಂಕಗಳಂತೆ 6 ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಪ್ರತಿ ವಿದ್ಯಾರ್ಥಿ ಪಡೆದ ಅಂಕಗಳನ್ನು ಇದಕ್ಕನುಗುಣವಾಗಿ ಪ್ರತಿ ವಿಷಯದ ಗರಿಷ್ಠ 80 ಅಂಕಗಳಾಗಿ ಪರಿವರ್ತಿಸಿ ಜೊತೆಗೆ ಆಂತರಿಕ ಅಂಕಗಳನ್ನು ಸೇರಿಸಿ, ಒಟ್ಟು 625 ಅಂಕಗಳಿಗೆ ಫಲಿತಾಂಶ ಘೋಷಿಸುವಂತೆ ತಿಳಿಸಲಾಗಿದೆ.
ಕನ್ನಡ ಸೇರಿ ಪ್ರಥಮ ಭಾಷೆ ವಿಷಯಗಳ ಗರಿಷ್ಠ ಅಂಕಗಳನ್ನು 40 ರಿಂದ 100 ಅಂಕಗಳಿಗೆ ಪರಿವರ್ತಿಸಿ 25 ಆಂತರಿಕ ಅಂಕ ಸೇರಿಸಿ ಒಟ್ಟು 125 ಅಂಕಗಳಿಗೆ ಫಲಿತಾಂಶ ನೀಡಲಾಗುವುದು. ಉಳಿದ ವಿಷಯಗಳ ಪರೀಕ್ಷೆಯಲ್ಲಿ 40 ಅಂಕಗಳನ್ನು 80 ಅಂಕಗಳಿಗೆ ಪರಿವರ್ತಿಸಿ 20 ಆಂತರಿಕ ಅಂಕ ಸೇರಿಸಿ 100 ಅಂಕಗಳಿಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.