ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನಡೆಸಿದ ಸಿಇಟಿ -2024ರಲ್ಲಿ ಕ್ರೀಡಾ ಮೀಸಲಾತಿ ಕೋರಿದ ಅಭ್ಯರ್ಥಿಗಳಿಗೆ ನಾನಾ ಕ್ರೀಡೆಗಳ ಆಧಾರದ ಮೇಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ದಿಷ್ಟ ಅಂಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಪಡೆದ ಕ್ರೀಡಾ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ನಿಖರವಾಗಿ ಅಂಕ ಗೊತ್ತುಪಡಿಸಿ ಸೀಟು ಮೀಸಲಿಡಲಾಗುವುದು. ಇದೇ ಮೊದಲ ಬಾರಿಗೆ ಈ ರೀತಿ ಅಂಕ ನಿಗದಿಪಡಿಸಲಾಗಿದ್ದು, ಈ ವರ್ಷದಿಂದಲೇ ಜಾರಿಗೆ ಬರಲಿದೆ.
96 ಮಾದರಿಯ ಕ್ರೀಡಾ ಪ್ರಮಾಣ ಪತ್ರಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಿದ್ದಪಡಿಸಿದ್ದು, ಪ್ರತಿ ಕ್ರೀಡೆಗೆ ಕನಿಷ್ಠ 5 ಹಾಗೂ ಗರಿಷ್ಠ 100 ಅಂಕ ನಿಗದಿ ಮಾಡಲಾಗಿದೆ. ಇಷ್ಟು ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಈ ರೀತಿಯ ಅಂಕಗಳ ಮಾಹಿತಿಯ ಪಟ್ಟಿ ಇರಲಿಲ್ಲ. ಅಭ್ಯರ್ಥಿಗಳು ನೀಡಿದ ಕ್ರೀಡಾ ಪ್ರಮಾಣ ಪತ್ರ ಪರಿಶೀಲಿಸಿ ಅಂಕ ನಿಗದಿಪಡಿಸುವಂತೆ ಕೋರಿ ಕ್ರೀಡಾ ಇಲಾಖೆಗೆ ಪತ್ರ ಬರೆಯಲಾಗುತ್ತಿತ್ತು. ಅರ್ಹ ಕ್ರೀಡಾಪಟುಗಳಿಗೆ ಮೀಸಲಾತಿ ಸಿಗುತ್ತಿಲ್ಲವೆಂಬ ಆರೋಪ ಕೇಳಿ ಬಂದಿತ್ತು.
ಈಗ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ಪದ್ದತಿ ಜಾರಿಗೆ ತರಲಾಗಿದೆ. ಇಂಟರ್ನ್ಯಾಷನಲ್ ಒಲಿಂಪಿಕ್ ಸಮಿತಿ, ಪ್ಯಾರಾ ಒಲಿಂಪಿಕ್ ಸಮಿತಿ ನೀಡುವ ಚಿನ್ನದ ಪದಕಕ್ಕೆ 100, ಬೆಳ್ಳಿಗೆ 99, ಕಂಚಿನ ಪದಕಕ್ಕೆ 98 ಅಂಕ ನಿಗದಿಪಡಿಸಲಾಗಿದೆ. ಇದೇ ರೀತಿ ಕೆಲವು ವಿಭಾಗ ಮಟ್ಟದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ನೀಡುವ ಪ್ರಮಾಣ ಪತ್ರಗಳಲ್ಲಿ ಜೂನಿಯರ್ ಗಳಿಗೆ 5, ಸಬ್ ಜೂನಿಯರ್ ಗಳಿಗೆ 6 ಅಂಕ ನಿಗದಿಪಡಿಸುವ ವ್ಯವಸ್ಥೆ ರೂಪಿಸಲಾಗಿದೆ.