
ಬೆಂಗಳೂರು: ವಿದ್ಯಾರ್ಥಿಗಳು ಹೆಚ್ಚುವರಿ ಕೃಪಾಂಕದ ಆಸೆ ಕೈಬಿಟ್ಟು ಪಾಸ್ ಆಗಲು ಕನಿಷ್ಠ 35 ಅಂಕಗಳನ್ನು ತೆಗೆಯಲೇಬೇಕು ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಪುನರುಚ್ಚರಿಸಿದ್ದಾರೆ.
ಗುರುವಾರ ನಡೆದ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳ ಪೂರ್ವ ಸಿದ್ಧತಾ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಇಲಾಖೆಗಳ ಸಹಕಾರ ಕೋರಲಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಪರಿಚಯಿಸಿದ್ದ ಹಿನ್ನೆಲೆಯಲ್ಲಿ ಕೃಪಾಂಕ ಹೆಚ್ಚಳ ಜೊತೆಗೆ ಪಾಸ್ ಆಗಲು ನಿಗದಿಪಡಿಸಿದ್ದ ಕನಿಷ್ಠ 35 ಅಂಕಗಳನ್ನು 25ಕ್ಕೆ ಇಳಿಕೆ ಮಾಡಲಾಗಿತ್ತು. ಈ ಕೃಪಾಂಕಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವರ್ಷ ಕೃಪಾಂಕ ಕೈ ಬಿಡಲಾಗಿದೆ. ಕಳೆದ ವರ್ಷದ ಹಿಂದೆ ಅಂದರೆ 2023ರಲ್ಲಿ ನೀಡಲಾಗುತ್ತಿದ್ದ ಶೇಕಡ 10ರ ಕೃಪಾಂಕದ ಮಾದರಿ ಅನುಸರಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಕೃಪಾಂಕದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆಯಲು ಶ್ರಮ ವಹಿಸಬೇಕು. ಉತ್ತೀರ್ಣರಾಗಲು ಕನಿಷ್ಠ 35 ಅಂಕ ತೆಗೆಯಲೇಬೇಕು ಎಂದು ಹೇಳಿದ್ದಾರೆ.