ಯೋಗ ನಮ್ಮ ಆರೋಗ್ಯ ವೃದ್ಧಿಗೆ ಹೇಳಿ ಮಾಡಿಸಿದ ಮದ್ದು. ಪ್ರತಿ ದಿನ ನಿಯಮಿತವಾಗಿ ಯೋಗ ಮಾಡುವುದ್ರಿಂದ ಅನೇಕ ಲಾಭಗಳಿವೆ.
ಭಾರತವೊಂದೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಈಗ ಯೋಗ ಅಭ್ಯಾಸ ಶುರುವಾಗಿದೆ. ಯೋಗವನ್ನು ಒಂದು ಕ್ರೀಡೆಯಾಗಿಯೂ ಪರಿಗಣಿಸಲಾಗ್ತಿದೆ.
ಪ್ರತಿದಿನ ಮಹಿಳೆಯರು ಯೋಗಾಸನಗಳನ್ನು ಮಾಡುತ್ತ ಬಂದಲ್ಲಿ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಮಹಿಳೆಯರಿಗೆ ನೆರವಾಗುವ ಯೋಗಾಸನಗಳಲ್ಲಿ ಮಾರ್ಜರಿಯಾಸನ ಕೂಡ ಒಂದು. ಈ ಆಸನ ಕುತ್ತಿಗೆ, ಭುಜ, ಹಿಂಭಾಗಕ್ಕೆ ಬಲ ನೀಡುತ್ತದೆ. ಬೆನ್ನು ನೋವು, ಸೆಳೆತ, ಕುಳಿತುಕೊಳ್ಳಲು ತೊಂದರೆ ಪಡುವವರು ನಿಯಮಿತವಾಗಿ ಈ ಮಾರ್ಜರಿಯಾಸನ ಮಾಡಬೇಕು.
ಮುಟ್ಟಿನ ಸಮಯದಲ್ಲಿ ಕಾಡುವ ಪಾದ, ಕಾಲುಗಳ ನೋವು ಹಾಗೂ ಸೊಂಟದ ನೋವನ್ನು ಕಡಿಮೆ ಮಾಡುವ ಶಕ್ತಿ ಮಾರ್ಜರಿಯಾಸನಕ್ಕಿದೆ.
ಮೊದಲು ನೆಲದ ಮೇಲೆ ಚಾಪೆ ಹಾಸಿ. ಅದ್ರ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಂತ್ರ ನಿಮ್ಮೆರಡು ಕೈಗಳನ್ನು ಮುಂದಕ್ಕೆ ಇಡಿ. ಮಕ್ಕಳು ಅಂಬೆಗಾಲಿಡುವಾಗ ಯಾವ ಸ್ಥಿತಿಯಲ್ಲಿರುತ್ತಾರೋ ಆ ಸ್ಥಿತಿಗೆ ಬನ್ನಿ. ನಿಮ್ಮ ಕೈ ಹಾಗೂ ತೊಡೆ ಎರಡೂ ನೇರವಾಗಿರಲಿ. ಆಳವಾಗಿ ಉಸಿರನ್ನು ಎಳೆದುಕೊಳ್ಳಿ. ಹೊಟ್ಟೆ ಒಳಗೆ ಹೋಗ್ಲಿ. ಮುಖ ನೇರವಾಗಿರಲಿ. ಹೀಗೆ ಮೂರು ಸೆಕೆಂಡುಗಳ ಕಾಲ ಇರಿ. ನಂತ್ರ ಉಸಿರು ಬಿಟ್ಟು, ತಲೆಯನ್ನು ಕೆಳಗೆ ಬಗ್ಗಿಸಿ ನಿಮ್ಮ ದೇಹವನ್ನು ನೋಡಿಕೊಳ್ಳಿ. ಇದನ್ನೂ ಮೂರು ಸೆಕೆಂಡುಗಳ ಕಾಲ ಮಾಡಿ. ನಂತ್ರ ಸಹಜ ಸ್ಥಿತಿಗೆ ಮರಳಿ. ಹೀಗೆ 10 ಬಾರಿ ಪ್ರತಿದಿನ ಮಾಡಿ. ಪರಿಣಾಮವನ್ನು ನೀವೇ ನೋಡಬಹುದು.
ಭಂಗಿ ಬಗ್ಗೆ ಸರಿಯಾಗಿ ಮಾಹಿತಿಯಿಲ್ಲವಾದಲ್ಲಿ ಯೋಗ ಶಿಕ್ಷಕರನ್ನು ಸಂಪರ್ಕಿಸಿ ಸರಿಯಾಗಿ ಮಾಹಿತಿ ಪಡೆದು ಅಭ್ಯಾಸ ಶುರುಮಾಡಿ.