ಮರಾಠಿ ನಟಿ ಹಾಗೂ ಆಕೆಯ ಸ್ನೇಹಿತ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಗೋವಾದ ಅರ್ಪೋರಾ ಗ್ರಾಮದಲ್ಲಿ ನಡೆದಿದೆ. ನಟಿ ಹಾಗೂ ಆಕೆಯ ಸ್ನೇಹಿತನಿದ್ದ ಕಾರು ಬಾಗಾ – ಬ್ಯಾಲಂಗೂಟ್ ಮಾರ್ಗದ ಸೇತುವೆಯಿಂದ ಕಂದಕಕ್ಕೆ ಉರುಳಿದೆ. ಕಾರು ನೀರಿನಲ್ಲಿ ಬಿದ್ದಿದ್ದರಿಂದ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತ ನಟಿಯನ್ನು ಈಶ್ವರಿ ದೇಶಪಾಂಡೆ(25) ಹಾಗೂ ಆಕೆಯ ಸ್ನೇಹಿತನನ್ನು ಶುಭಂ ದೆಡ್ಗೆ (28) ಎಂದು ಗುರುತಿಸಲಾಗಿದೆ. ಮೃತ ನಟಿ ಈಶ್ವರಿ ಕೆಲ ದಿನಗಳ ಹಿಂದಷ್ಟೇ ಮರಾಠಿ ಹಾಗೂ ಹಿಂದಿ ಸಿನಿಮಾಗಳ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು.
ಇವರಿಬ್ಬರು ಸೆಪ್ಟೆಂಬರ್ 15ರಂದು ಗೋವಾ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಅರ್ಪೋರಾ ಗ್ರಾಮದಲ್ಲಿ ಕಿರಿದಾದ ರಸ್ತೆಯಲ್ಲಿ ಶುಭಂ ಕಾರು ನಿಯಂತ್ರಣ ಕಳೆದುಕೊಂಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಕಾರು ಲಾಕ್ ಆಗಿದ್ದರಿಂದ ಇಬ್ಬರಿಗೂ ಹೊರಬರಲು ಸಾಧ್ಯವಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಈಶ್ವರಿ ಹಾಗೂ ಶುಭಂ ಅನೇಕ ವರ್ಷಗಳಿಂದ ಸ್ನೇಹಿತರಾಗಿದ್ದರು. ಇಬ್ಬರ ಸ್ನೇಹ ಪ್ರೀತಿಗೂ ತಿರುಗಿದ್ದು ಮುಂದಿನ ತಿಂಗಳು ನಿಶ್ಚಿತಾರ್ಥಕ್ಕೆ ಪ್ಲಾನ್ ಕೂಡ ಮಾಡಿದ್ದರು ಎನ್ನಲಾಗಿದೆ. ಈ ಅಪಘಾತದ ವಾರ್ತೆಯು ಎಲ್ಲರನ್ನು ಆಘಾತಕ್ಕೊಳಪಡಿಸಿದೆ.