ನೋನಿ ಹಣ್ಣು ಅಥವಾ ನೋನಿ ಹಣ್ಣಿನ ಜ್ಯೂಸ್ ಕುಡಿದರೆ ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆಯೇ? ಸಕ್ಕರೆ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗಿತ್ತದೆಯೇ?. ಸಕ್ಕರೆ ಕಾಯಿಲೆ ಮಾತ್ರವಲ್ಲ ಬಿಪಿ, ಶುಗರ್, ಕ್ಯಾನ್ಸರ್, ಥೈರಾಯ್ಡ್, ಮಂಡಿನೋವು ಹೀಗೆ ಎಲ್ಲಾ ಕಾಯಿಲೆಗಳು ಕಡಿಮೆಯಾಗುತ್ತವೆಯೇ…? ಅಷ್ಟೇ ಏಕೆ ದಪ್ಪ ಇರುವವರು ಸಣ್ಣಗಾಗುತ್ತಾರೆಯೇ….? ಯಾವುದೇ ಕಾಯಿಲೆಯನ್ನಾದರೂ ನೋನಿ ಹಣ್ಣು ವಾಸಿ ಮಾಡುತ್ತದೆ ಎಂಬ ಜಾಹೀರಾತುಗಳನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ. ನಿಜಕ್ಕೂ ನೋನಿ ಹಣ್ಣು ಅಥವಾ ಹಣ್ಣಿನ ಜ್ಯೂಸ್ ಡಯಾಬಿಟೀಸ್ ಸೇರಿದಂತೆ ಎಲ್ಲಾ ಕಾಯಿಲೆಗೂ ರಾಮ ಬಾಣವೇ ? ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಿಲ್ಲವೇ ? ಜಾಹಿರಾತಿನಲ್ಲಿ ಹೇಳುತ್ತಿರುವುದು ಎಷ್ಟರಮಟ್ಟಿಗೆ ಸತ್ಯ ಎಂಬ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ನೋನಿ ಹಣ್ಣನ್ನು ಇಂಡಿಯನ್ ಮಲ್ಬರಿ ಎಂದು ಕರೆಯುತ್ತೇವೆ. ಇದು ನಮ್ಮ ದೇಶದಲ್ಲಿ ಬೆಳೆಯುವ ಹಣ್ಣಲ್ಲ, ಅದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿಯೂ ಬೆಳೆಯಲಾಗುತ್ತಿದೆ. ಮೂಲತಃ ಈ ಹಣ್ಣು ಇಂಡೋನೇಷ್ಯಾ ಹಾಗೂ ಆಷ್ಟ್ರೇಲಿಯಾದಲ್ಲಿ ಬೆಳೆಯುವ ಹಣ್ಣು. ಅಲ್ಲಿನ ಮಣ್ಣಿಗೆ ಹಾಗೂ ವಾತಾವರಣಕ್ಕೆ ಹೊಂದುವಂತ ಮಣ್ಣಿನಲ್ಲಿ ಬೆಳೆಯುವ ಹಣ್ಣಾಗಿದೆ. ಅಲ್ಲಿ ಈ ಹಣ್ಣನ್ನು ಕತ್ತರಿಸಿ ಉಪ್ಪು ಹಚ್ಚಿ ಸೇವಿಸುತ್ತಾರೆ. ತರಕಾರಿಯಂತೆಯೂ ಉಪಯೋಗಿಸಲಾಗುತ್ತದೆ. ಆದರೆ ಈ ಹಣ್ಣು ಹುಳಿ ಹಾಗೂ ತುಂಬಾ ಕಹಿಯಾಗಿರುತ್ತದೆ. ನಮ್ಮ ದೇಶದ ವಾತಾವರಣ, ಮಣ್ಣಿಗೆ ಈ ಹಣ್ಣು ಸೂಟ್ ಆಗುವುದಿಲ್ಲ. ಯಾವ ಹಣ್ಣು ಅಥವಾ ಬೆಳೆ ನಮ್ಮ ದೇಶದ ವಾತಾವರಣ, ಮಣ್ಣಿಗೆ ಸೂಟ್ ಆಗುವುದಿಲ್ಲವೋ ಅದು ನಮ್ಮ ದೇಹಕ್ಕೂ ಕೂಡ ಹೊಂದಿಕೊಳ್ಳುವುದಿಲ್ಲ ಎಂದು ಡಾ. ರಾಜು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ 7-8 ವರ್ಷಗಳಿಂದ ನೋನಿ ಜ್ಯೂಸ್ ಗೆ ಭಾರಿ ಪ್ರಚಾರ, ಬೇಡಿಕೆ ಹೆಚ್ಚಾಗಿದೆ. ಇಷ್ಟಕ್ಕೂ ನೋನಿ ಹಣ್ಣಿನಲ್ಲಿರುವ ಅಂಶಗಳಾದರು ಯಾವುದು ಎಂಬುದನ್ನು ನೋಡುವುದಾದರೆ ಯಥೇಚ್ಚವಾಗಿ ಪೊಟಾಶಿಯಂ ಎಂಬ ಮಿನರಲ್, ವಿಟಮಿನ್ ಸಿ, ಸ್ವಲ್ಪ ಪ್ರಮಾಣದಲ್ಲಿ ಬಯೋಟಿನ್ ಹಾಗೂ ಇತರ ಮಿನರಲ್ಸ್ ಗಳಿವೆ. ಹಾಗೆ ನೋಡುವುದಾದರೆ ಡಯಾಬಿಟೀಸ್, ಕ್ಯಾನ್ಸರ್ ಹೋಗುವಂತ ಯಾವುದೇ ಅಂಶ ಈ ಹಣ್ಣಿನಲ್ಲಿ ಇಲ್ಲ. ಇದೇ ಕಾರಣಕ್ಕೆ ಎಫ್ ಡಿ ಎ-ಅಮೆರಿಕಾ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಸಂಸ್ಥೆ ನೋನಿ ಹಣ್ಣಿನಲ್ಲಿ ಡಯಾಬಿಟೀಸ್, ಕ್ಯಾನ್ಸರ್ ಕಡಿಮೆಯಾಗುವ ನಿಖರ ಅಂಶಗಳಿಲ್ಲ. ಹಾಗಾಗಿ ಈ ರೀತಿ ಸುಳ್ಳು ಮಾರ್ಕೆಟಿಂಗ್ ಅಥವಾ ಜಾಹೀರಾತು ನೀಡಬಾರದು ಎಂದು ಎಚ್ಚರಿಸಿದೆ.
ಪೊಟಾಶಿಯಂ ದೇಹದಲ್ಲಿ ಹೆಚ್ಚಾದರೆ ಅದು ನಮ್ಮ ಲಿವರ್ ಗೆ ತೊಂದರೆಯಾಗುತ್ತದೆ. ಕಿಡ್ನಿ ಹಾಗೂ ಹಾರ್ಟ್ ಗೂ ಸಮಸ್ಯೆಯಾಗುತ್ತದೆ. ಪೊಟಾಶಿಯಂ ಅಂಶ ಹೆಚ್ಚಾದಾಗ ಹಾರ್ಟ್ ಬೀಟ್ ಜಾಸ್ತಿಯಾಗುತ್ತದೆ ಹಾಗೂ ಅನಿಯಮಿತ ಎದೆ ಬಡಿತ ಆರಂಭವಗುತ್ತದೆ. ಅಲ್ಲದೇ ಹಾರ್ಟ್ ಅಟ್ಯಾಕ್ ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ನೋನಿ ಹಣ್ಣು ತುಂಬಾ ಕಹಿ ಇರುವುದರಿಂದ ಹಾಗೆಯೇ ಸೇವಿಸಲು ಸಾಧ್ಯವಿಲ್ಲ. ಇದರಿಂದ ನೋನಿ ಜ್ಯೂಸ್ ನಲ್ಲಿ ಸ್ವೀಟನರ್ಸ್ ಸೇರಿಸಲಾಗುತ್ತದೆ. ಅಲ್ಲದೇ ಅದು ಕೆಡದಂತೆ ರಾಸಾಯನಿಕ ಮಿಶ್ರಣ ಮಾಡಲಾಗುತ್ತದೆ. ಇದು ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ಹಾಗಂತ ನೋನಿ ಹಣ್ಣು ಸೇವಿಸಲೇ ಬಾರದು ಎಂದು ಹೇಳುತ್ತಿಲ್ಲ. ನೋನಿ ಹಣ್ಣು ಇಷ್ಟವಿದ್ದರೆ ಸೇವಿಸಬಹುದು. ಆದರೆ ನೋನಿ ಹಣ್ಣು ಅತಿ ಉಪಯುಕ್ತ, ಕಾಯಿಲೆ ನಿವಾರಣೆಯಾಗುತ್ತದೆ ಎಂಬುದು ಸುಳ್ಳು. ಈ ಹಣ್ಣಿನಲ್ಲಿರುವ ಅಂಶಗಳು ಬೇರೆ ಹಣ್ಣಿನಲ್ಲಿಯೂ ಸಿಗುತ್ತವೆ. ಯಾವುದೇ ಫ್ರೆಶ್ ಫ್ರೂಟ್ಸ್ ನ್ನು ಕತ್ತರಿಸಿ ಉಪ್ಪು ಸವರಿ ಸೇವಿಸಬಹುದು. ಹಣ್ಣುಗಳ ಜ್ಯೂಸ್ ಗಿಂತ ಹಣ್ಣುಗಳನ್ನು ಕತ್ತರಿಸಿ ಸ್ಲೈಸ್ ಮಾಡಿ, ಉಪ್ಪು ಹಾಕಿಕೊಂಡು ತಿಂದರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.
ಇನ್ನು ನೋನಿ ಹಣ್ಣಿನಲ್ಲಿರುವ ಸಿಟ್ರಿಕ್ ಅಂಶ ನಿಂಬು, ಆರೇಂಜ್ ಸೇರಿದಂತೆ ಹುಳಿ ಅಂಶ ಇರುವ ಇತರ ಹಣ್ಣುಗಳಲ್ಲಿಯೂ ಇರುತ್ತದೆ. ನೋನಿ ಹಣ್ಣಿನಲ್ಲಿರುವ ಪೋಷ್ಠಿಕಾಂಶಕ್ಕಿಂತ ಹೆಚ್ಚಿನ ಪೋಷ್ಠಿಕಾಂಶ ನಾವು ಬೆಳೆಯುವ ನಿಂಬೆ ಹಣ್ಣು, ಆರೇಂಜ್ ಇತ್ಯಾದಿಗಳಲ್ಲಿಯೂ ಇರುತ್ತದೆ. ಪ್ರತಿ ದಿನ ಈ ಹಣ್ಣು ಉಪಯೋಗಿಸುವುದರಿಂದ ನೋನಿ ಹಣ್ಣಿಗಿಂತಲೂ ಹೆಚ್ಚು ಲಾಭ ಪಡೆದುಕೊಳ್ಳಬಹುದು ಎಂದು ಡಾ. ರಾಜು ವಿವರಿಸಿದ್ದಾರೆ.