ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಶಾಕ್ ಆಗಿದೆ. ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಮಂತ್ರಿ ಮಾಲ್ ಗೆ ಬೀಗಹಾಕಿದ್ದಾರೆ.
ತೆರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. ಅಲ್ಲದೇ ಮಾಲ್ ಸೀಜ್ ಮಾಡಲಾಗಿದೆ. 32 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಗೆ ಬಿಬಿಎಂಪಿ ತೆರಿಗೆ ವಿಭಾಗದ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಮಂತ್ರಿ ಮಾಲ್ ಗೆ ತೆರಿಗೆ ಹಣ ಪಾವತಿಸುವಂತೆ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದರು. ನೋಟೀಸ್ ಕೂಡ ನೀಡಲಾಗಿತ್ತು. ಆದರೆ ಮಂತ್ರಿ ಮಾಲ್ ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಇಂದು ತೆರಿಗೆ ವಿಭಾಗದ ಅಧಿಕಾರಿಗಳು ಮಾಲ್ ಸೀಜ್ ಮಾಡಿ ತೆರಳಿದ್ದಾರೆ. ಇದರಿಂದಾಗಿ ವೀಕೆಂಡ್ ಸಂದರ್ಭದಲ್ಲೇ ಮಂತ್ರಿ ಮಾಲ್ ಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ.