
ರಾಯಚೂರು: ಕಲಿಯುಗದ ಕಾಮಧೇನು,ಕಲ್ಪವೃಕ್ಷ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಈ ಬಾರಿ ಬರೋಬ್ಬರಿ 3.39 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.
ಈ ತಿಂಗಳು ಗುರುವೈಭವೋತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಂತ್ರಾಲಯ ರಾಯರ ಮಠಕ್ಕೆ ರಾಜ್ಯ-ಹೊರರಾಜ್ಯ, ದೇಶ-ವಿದೇಶಗಳಿಂದ ಭಕ್ತಸಾಗರವೇ ಹರಿದುಬಂದಿದ್ದು, ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹಾಗೂ ಚಿನ್ನಾಭರಣ ಸಮರ್ಪಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ 3 ಕೋಟಿ 39 ಲಕ್ಷ 35 ಸಾವಿರದ 121 ರೂಪಾಯಿ ಹಣ ಸಂಗ್ರಹವಾಗಿದೆ. ಇದರಲ್ಲಿ 9 ಲಕ್ಷ 34 ಸಾವಿರದ 500 ರೂಪಾಯಿ ನಾಣ್ಯಗಳು, 3 ಕೋಟಿ 48 ಲಕ್ಷದ 69 ಸಾವಿರದ 621 ರೂಪಾಯಿ ನೋಟುಗಳು ಇವೆ. 37.200 ಗ್ರಾಂ ಚಿನ್ನ, 1280 ಕೆಜಿ ಬೆಳ್ಳಿ ಕಾಣಿಕೆಯನ್ನು ಭಕ್ತರು ಸಮರ್ಪಿಸಿದ್ದಾರೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.