ನಾಯಿಯನ್ನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಕರೆಯುತ್ತಾರೆ. ಇದು ಮತ್ತೆ ಸಾಬೀತಾಗಿದೆ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಾಕು ನಾಯಿಯೊಂದು ತನ್ನ ಮಾಲೀಕನನ್ನ ಅಪಹರಣ ಪ್ರಯತ್ನದಿಂದ ರಕ್ಷಿಸಿ, ಈ ಗಾದೆಯನ್ನ ನಿಜವೆಂದು ಸಾಬೀತುಪಡಿಸಿದೆ.
ಕೆಲ ದುಷ್ಕರ್ಮಿಗಳು ಶ್ವಾನದ ಮಾಲೀಕ ನಿತಿನ್ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದಾರೆ. ಇದನ್ನ ಗಮನಿಸಿದ ನಿತಿನ್ ಅವರ ನಾಯಿ ತಕ್ಷಣವೇ ಬೊಗಳಲು ಪ್ರಾರಂಭಿಸಿ, ಆಕ್ರಮಣಕಾರರ ಮೇಲೆ ದಾಳಿ ಮಾಡಿದೆ. ನಾಯಿಗೆ ಹೆದರಿದ ದುಷ್ಕರ್ಮಿಗಳಿಗೆ ಸ್ಥಳದಿಂದ ಕಾಲ್ಕಿಳುವುದನ್ನ ಬಿಟ್ಟು ಬೇರೆ ದಾರಿ ಇರಲಿಲ್ಲ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಅಶೋಕ್ ನಗರದಲ್ಲಿ ನಡೆದಿದ್ದು, ಇಡೀ ಗಲಾಟೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನ ಪ್ರೀತಿಯ ಮಾಲೀಕನ ಮೇಲೆ ಹಲ್ಲೆ ಮಾಡಿದ ಐದಾರು ದುಷ್ಕರ್ಮಿಗಳ ವಿರುದ್ಧ, ಕೆಚ್ಚೆದೆಯ ಜರ್ಮನ್ ಶೆಫರ್ಡ್ ನಾಯಿ ಬೊಗಳಿ, ಆಕ್ರಮಣ ಮಾಡಿ ಓಡಿಸಿದೆ.
ನಿತಿನ್ ಮನೆಯಲ್ಲಿ ಒಬ್ಬರೇ ಇದ್ದಾಗ ಐದಾರು ಜನರು ಬಿಳಿ ವ್ಯಾನ್‌ನಲ್ಲಿ ಬಂದು ಅವನನ್ನು ಹೊರಗೆ ಕರೆದರು. ಈ ಗುಂಪು ಹಾಗೂ ನಿತಿನ್ ನಡುವೆ ಮಾತಿನ ಚಕಮಕಿ ನಡೆದಿದೆ, ಆನಂತರ ಇದ್ದಕ್ಕಿದ್ದಂತೆ ದುಷ್ಕರ್ಮಿಗಳು ನಿತಿನ್‌ಗೆ ಥಳಿಸಲು ಪ್ರಾರಂಭಿಸಿದ್ದು, ನಂತರ ಅವರನ್ನು ಬಲವಂತವಾಗಿ ವ್ಯಾನ್‌ಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದರು.
ಈ ವೇಳೆ ನಿತಿನ್ ಅವರ ನಾಯಿ ಬೊಗಳುತ್ತಾ ಮನೆಯಿಂದ ಹೊರಬಂದು ದಾಳಿಕೋರರ ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಬೆದರಿದ ದುಷ್ಕರ್ಮಿಗಳು ನಿತಿನ್ ಅವರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಗ್ವಾಲಿಯಾರ್ ನ ಹೆಚ್ಚುವರಿ ಎಸ್ಪಿ ರಾಜೇಶ್ ದಂಡೋಟಿಯಾ ಘಟನೆಯನ್ನ ವಿವರಿಸಿದ್ದಾರೆ. ಘಟನೆ ಸಂಬಂಧ ತಾಟಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
https://youtu.be/MZEANvvwgvk