ಶ್ವಾನವು ಮನುಷ್ಯರನ್ನು ಪ್ರೀತಿಸುವ ಬಗೆಗೆ ಬೇರೆ ಸಾಟಿ ಇಲ್ಲ. ದೊಡ್ಡ ನಾಯಿ ಮಾತ್ರವಲ್ಲದೇ ಶ್ವಾನದ ಮರಿ ಕೂಡ ನಿಮ್ಮನ್ನು ಅಪಘಾತದಿಂದ ರಕ್ಷಿಸುತ್ತೆ ಅನ್ನೋದನ್ನು ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಸಾಬೀತು ಪಡಿಸಿದೆ. ಬುಧವಾರ ಅಪಾರ್ಟ್ಮೆಂಟ್ ಒಂದರಲ್ಲಿ ಈ ಶ್ವಾನದ ಮರಿಯು ಒಂದಲ್ಲ ಎರಡಲ್ಲ ಬದಲಾಗಿ ಸುಮಾರು 150 ಮಂದಿಯ ಪ್ರಾಣವನ್ನು ಕಾಪಾಡಿದೆ.
ಒಂದೂವರೆ ವರ್ಷದ ಗೋಲ್ಡನ್ ರಿಟ್ರೈವರ್ ಎಂಬ ಶ್ವಾನದ ಮರಿಯು ಎಲೆಕ್ಟ್ರಾನಿಕ್ ಸಿಟಿಯ ಸಂಪಿಗೆ ನಗರದ ವಸುಂದರಾ ಲೇ ಔಟ್ನಲ್ಲಿರುವ ವಿಎಂಎಕೆಎಸ್ ಚಾಲೆಟ್ ಅಪಾರ್ಟ್ಮೆಂಟ್ನಲ್ಲಿ ವಾಸವಿತ್ತು. ವಿಜಯ್ ಪಿಳೈ ಎಂಬವರಿಗೆ ಸೇರಿದ ಈ ಫ್ಲಾಟ್ನಲ್ಲಿ 60 ವರ್ಷದ ವೃದ್ಧೆ ಶ್ವಾನದ ಜೊತೆಯಲ್ಲಿ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಅಪಾರ್ಟ್ಮೆಂಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತಿದ್ದಂತೆಯೇ ಶ್ವಾನವು ಬೊಗಳಲು ಆರಂಭಿಸಿದೆ. ಹಾಗೆಲ್ಲ ಎಂದಿಗೂ ಕೂಗದ ಶ್ವಾನವು ವಿಚಿತ್ರವಾಗಿ ಬೊಗಳೋದನ್ನು ನೋಡಿ ವೃದ್ಧೆಯು ಶ್ವಾನದ ಬಳಿ ಬಂದಿದ್ದಾರೆ. ಆಗ ಅಪಾರ್ಟ್ಮೆಂಟ್ನಲ್ಲಿ ಹೊಗೆ ಹಾಗೂ ಬೆಂಕಿಯನ್ನು ಗಮನಿಸಿದ್ದಾರೆ.
ಕೂಡಲೇ ವೃದ್ಧೆಯು ಅಪಾರ್ಟ್ಮೆಂಟ್ನ ನಿವಾಸಿಗಳನ್ನು ಎಚ್ಚರಿಸಿದ್ದಾಳೆ. ಕೂಡಲೇ ಎಲ್ಲರೂ ತಮ್ಮ ತಮ್ಮ ಮನೆಯಿಂದ ಹೊರ ನಡೆದಿದ್ದಾರೆ. ಶ್ವಾನದ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ವಿಚಾರವಾಗಿ ಮಾತನಾಡಿದ ಅಗ್ನಿಶಾಮಕ ದಳ ಹಿರಿಯ ಅಧಿಕಾರಿ ನಾಗೇಶ್, ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಗ್ಯಾಸ್ ಸಿಲಿಂಡರ್ಗಳು ಇದರಿಂದ ಯಾವುದೇ ಹಾನಿಗೆ ಒಳಗಾಗಿಲ್ಲ. ಬಹುಶಃ ಇದು ಫ್ರಿಡ್ಜ್ ಅಥವಾ ಗೀಸರ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿರುವಂತೆ ಕಾಣುತ್ತಿದೆ. ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದೇವೆ ಎಂದು ಹೇಳಿದ್ರು.
ಈ ಅಪಾರ್ಟ್ಮೆಂಟ್ನಲ್ಲಿ 50 ಮನೆಗಳಿದ್ದು 150ಕ್ಕೂ ಹೆಚ್ಚು ಮಂದಿ ವಾಸವಿದ್ದರು. ಪ್ರಾಣಾಪಾಯದಿಂದ ಕಾಪಾಡಿದ ಶ್ವಾನ ಅಪ್ಪುಗೆ ಅಪಾರ್ಟ್ಮೆಂಟ್ನ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.