ಸಿಖ್ ಮೂಲಭೂತವಾದಿ ಪ್ರಚಾರಕ ಅಮೃತ್ ಪಾಲ್ ಸಿಂಗ್ ಹಾಗೂ ಅವರ ಸಹಚರರ ಬಂಧನಕ್ಕಾಗಿ ಪಂಜಾಬ್ ನಲ್ಲಿ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದು, ಇದರ ಮಧ್ಯೆ ಖಲಿಸ್ತಾನಿ ಆರ್ಮಿ ಹೆಸರಿನಲ್ಲಿ ಅಮೃತ್ ಪಾಲ್ ಸಿಂಗ್ ಬೆಂಬಲಿಗರು ಬೆದರಿಕೆ ಕರೆ ಮಾಡಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಪುತ್ರಿ ಸೀರತ್ ಕೌರ್ ಅವರಿಗೆ ಮೂರು ಬಾರಿ ಕರೆ ಮಾಡಿರುವ ಕೆಲವರು ಅಶ್ಲೀಲವಾಗಿ ನಿಂದಿಸಿದ್ದಾರೆ. ಅಷ್ಟೇ ಅಲ್ಲ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸೀರತ್ ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಅಮೆರಿಕದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ.
ಭಗವಂತ ಸಿಂಗ್ ಮಾನ್ ಅವರ ಮಾಜಿ ಪತ್ನಿ ಇಂದರ್ ಪ್ರೀತ್ ಕೌರ್ ಗ್ರೇವಾಲ್ ತಮ್ಮ ಪುತ್ರಿ 21 ವರ್ಷದ ಸೀರತ್ ಕೌರ್ ಹಾಗೂ 18 ವರ್ಷದ ಪುತ್ರ ದಿಲ್ಶಾನ್ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ ಸಿಂಗ್ ಮಾನ್ ಪ್ರಮಾಣವಚನ ಸ್ವೀಕರಿಸಿದ ವೇಳೆ ಪುತ್ರ ಹಾಗೂ ಪುತ್ರಿ ಭಾರತಕ್ಕೆ ಬಂದಿದ್ದರು.