ನವದೆಹಲಿ: ನಾನು ಸ್ವೀಕರಿಸಿದ ಉಡುಗೊರೆಗಳ ವಿಶೇಷ ‘ಇ-ಹರಾಜು’ ನಡೆಯಲಿದ್ದು, ಅದರಿಂದ ಬರುವ ಆದಾಯವನ್ನು ‘ನಮಾಮಿ ಗಂಗೆ’ ಅಭಿಯಾನಕ್ಕೆ ಮೀಸಲಿಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
81 ನೇ ‘ಮನ್ ಕಿ ಬಾತ್’ ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ವಿಶ್ವ ನದಿ ದಿನವನ್ನು ಆಚರಿಸಲಾಗುತ್ತಿದೆ. ದೇಶದಾದ್ಯಂತ ವರ್ಷಕ್ಕೊಮ್ಮೆಯಾದರೂ ‘ನದಿ ಹಬ್ಬ’ ಆಚರಿಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ. ಸೆಪ್ಟೆಂಬರ್ ಒಂದು ಪ್ರಮುಖ ತಿಂಗಳು, ನಾವು ವಿಶ್ವ ನದಿ ದಿನವನ್ನು ಆಚರಿಸುವ ತಿಂಗಳು ಇದಾಗಿದೆ. ನಿಸ್ವಾರ್ಥವಾಗಿ ನಮಗೆ ನೀರನ್ನು ಒದಗಿಸುವ ನಮ್ಮ ನದಿಗಳ ಕೊಡುಗೆಯನ್ನು ಸ್ಮರಿಸುವ ದಿನವಾಗಿದೆ ಎಂದು ಹೇಳಿದ್ದಾರೆ.
ವಿಶ್ವ ನದಿ ದಿನದಂದು ಜಲಮೂಲಗಳ ಮಹತ್ವವನ್ನು ರಾಷ್ಟ್ರಕ್ಕೆ ಪ್ರಧಾನಿ ಮೋದಿ ನೆನಪಿಸಿದ್ದು, ದೇಶದ ನದಿಗಳ ಮಹತ್ವದ ಬಗ್ಗೆ ಮಾತನಾಡಿದರು. ಪ್ರತಿ ಹನಿ ನೀರಿಗೂ ಬೆಲೆ ನೀಡುವಂತೆ ಮತ್ತು ಮಾಲಿನ್ಯ ತಡೆಗಟ್ಟುವಂತೆ ಮನವಿ ಮಾಡಿದ್ದಾರೆ.