ನವದೆಹಲಿ: ಪ್ರಧಾನಿ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಯುವಕರು ಕ್ರೀಡೆ, ಕೌಶಲ್ಯ ವೃದ್ಧಿಯತ್ತ ಆಸಕ್ತಿ ತೊರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
‘ಮನ್ ಕಿ ಬಾತ್’ಗೆ ತಮ್ಮ ಸಂದೇಶಗಳನ್ನು ಮತ್ತು ಸಲಹೆಗಳನ್ನು ಕಳುಹಿಸುವವರಲ್ಲಿ ಶೇಕಡ 75 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಹೇಳಿದ ಅವರು, ಇದರರ್ಥ ‘ಮನ್ ಕಿ ಬಾತ್’ ಭಾರತದ ಯುವಕರ ದೃಷ್ಟಿಕೋನವಾಗಿದೆ. ‘ಮನ್ ಕಿ ಬಾತ್’ ಒಂದು ಮಾಧ್ಯಮವಾಗಿದ್ದು ಅಲ್ಲಿ ಸಕಾರಾತ್ಮಕತೆ ಮತ್ತು ಸೂಕ್ಷ್ಮತೆ ಇರುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಖಾದಿ ಮತ್ತು ಕೈಮಗ್ಗ ಉತ್ಪನ್ನಗಳನ್ನು ಬಳಸುವಂತೆ ಜನರಿಗೆ ಮನವಿ ಮಾಡಿದರಲ್ಲದೆ, ಜನರು ಕೋವಿಡ್ -19 ಲಸಿಕೆ ಪಡೆಯಲು ಹಿಂಜರಿಕೆ ದೂರವಿಡುವಂತೆ ತಿಳಿಸಿದ್ದಾರೆ. ಕೊರೋನಾ ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.
ಲಸಿಕೆ ಬಗೆಗಿನ ವದಂತಿ ನಂಬದೇ ರೋಗ ಹರಡುವುದನ್ನು ನಿಯಂತ್ರಿಸಲು ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದ್ದಾರೆ.