ನವದೆಹಲಿ: ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ ಬರೆದಿದ್ದಾರೆ.
ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಅವರು ಅನೇಕ ಸಲಹೆ ನೀಡಿದ್ದಾರೆ. ಕೊರೋನಾ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕರೆ ನೀಡಿದ್ದು, ಲಸಿಕೆ ಉತ್ಪಾದಕರಿಗೆ ಅಗತ್ಯವಾದ ಹಣ, ರಿಯಾಯಿತಿ ಮತ್ತು ಪರವಾನಿಗೆಯನ್ನು ಹಂಚಿಕೆ ಮಾಡಬೇಕು ಎಂದು ಹೇಳಿದ್ದಾರೆ.
ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಜಾರಿಗೆ ತರಬಹುದಾದ ಮಾರ್ಗಗಳ ಬಗ್ಗೆ ಪತ್ರದಲ್ಲಿ ತಿಳಿಸಲಾಗಿದೆ. ಸಾಂಕ್ರಾಮಿಕ ರೋಗ ನಿರ್ವಹಣೆಗೆ ವ್ಯಾಕ್ಸಿನೇಷನ್ ವಿಸ್ತರಣೆ ಒಂದು ದೊಡ್ಡ ಭಾಗವಾಗಿದೆ ಎಂದು ಅವರು ಹೇಳಿದ್ದು, ಕೇಂದ್ರ ಸರ್ಕಾರ ಚುಚ್ಚುಮದ್ದಿನ ಸಂಖ್ಯೆಗಳನ್ನು ನೋಡುವ ಬದಲು ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಗಮನಿಸಬೇಕು ಎಂದು ಹೇಳಿದ್ದಾರೆ.
ಲಸಿಕೆ ನೀಡುವ ವಿಧಾನದಲ್ಲಿ ಪಾರದರ್ಶಕ ವಿಧಾನ ಅನುಸರಿಸಬೇಕು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಲಸಿಕೆ ಹಾಕುವ ಬಗ್ಗೆ ಮುಂಚೂಣಿ ಕಾರ್ಮಿಕ ವರ್ಗಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ತಿಳಿಸಬೇಕು. ಡೋಸ್ ಉತ್ಪಾದನೆ ಹೆಚ್ಚಿಸಬೇಕು. ಭಾರತದಲ್ಲಿ ಲಸಿಕೆ ಬಳಕೆಗೆ ತಕ್ಷಣದ ಅನುಮೋದನೆ ಮತ್ತು ಅನುಮತಿಯನ್ನು ನೀಡಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.