ಮಲಯಾಳಂ ಸಿನಿಮಾ ಮಂಜುಮ್ಮೆಲ್ ಬಾಯ್ಸ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಸಂಗೀತ ಮಾಂತ್ರಿಕ ಇಳಯರಾಜ ಮಂಜುಮ್ಮೆಲ್ ಬಾಯ್ಸ್ ಚಿತ್ರದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಈ ಚಿತ್ರದಲ್ಲಿ ತಮಿಳಿನ ಕಣ್ಮಣಿ ಅನ್ಬೊದು ಹಾಡನ್ನು ತಮ್ಮ ಒಪ್ಪಿಗೆ ಇಲ್ಲದೇ ಬಳಸಲಾಗಿದೆ ಎಂದು ಆಕ್ಷೇಪಿಸಿರುವ ಇಳಯರಾಜ, ಕಾಪಿ ರೈಟ್ ಉಲ್ಲಂಘನೆ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರಿಗೆ ನೋಟಿಸ್ ಕಳುಹಿಸಿದ್ದಾರೆ.
ಕಣ್ಮಣಿ ಅನ್ಬೊದು ಹಾಡನ್ನು ಸಿನಿಮಾದಲ್ಲಿ ಬಳಸಲೇಬೇಕಾದಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಅವರ ಅನುಮತಿ ಪಡೆಯುವ ಅಗತ್ಯವಿದೆ. ಕಣ್ಮಣಿ ಅನ್ಬೊದು ಹಾಡಿನ ಮೇಲೆ ಇಳಯರಾಜ ಅವರಿಗೆ ಕಾನೂನಾತ್ಮಕ, ನೈತಿಕ ಮತ್ತು ವಿಶೇಷ ಹಕ್ಕುಗಳಿವೆ. ಈ ನಿಟ್ಟಿನಲ್ಲಿ ಆ ಹಾಡಿನ್ನು ಅನಧಿಕೃತವಾಗಿ ಬಳಕೆ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವ ಹಕ್ಕನ್ನು ಇಳಯರಾಜ ಹೊಂದಿದ್ದಾರೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
2006ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸ್ನೇಹಿತರ ಗುಂಪೊಂದು ಕೊಡಿಅಕೆನಾಲ್ ಪ್ರವಾಸಕ್ಕೆ ಹೋಗಿದ್ದ ವೇಳೆ ಗುನಾ ಗುಹೆಯಲ್ಲಿ ಸಿಲುಕಿ ಬದುಕು ಏರುಪೇರಾಗುವ ಕಥೆಯನ್ನು ಚಿತ್ರ ಹೊಂದಿದೆ. ಇನ್ನು ಮಂಜುಮ್ಮೆಲ್ ಬಾಯ್ಸ್ ಸಿನಿಮಾ ನಿರ್ದೇಶಕರು ಈ ಹಿಂದೆ ಗುನಾ ಚಿತ್ರದ ಹಾಡೊಂದನ್ನು ಕೂಡ ಸಂಗೀತ ನಿರ್ದೇಶ ಇಳಯರಾಜ ಅವರ ಸಮ್ಮತಿ ಇಲ್ಲದೇ ಬಳಸಿದ್ದಾರೆ ಎಂಬ ಗುರುತರ ಆರೋಪ ಕೂಡ ಇದೆ.