
ನಕಲಿ ವಿಡಿಯೋ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಯೂಟ್ಯೂಬರ್ ಮನೀಶ್ ಕಶ್ಯಪ್ ಅವರಿಗೆ ರಿಲೀಫ್ ಸಿಕ್ಕಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪಾಟ್ನಾ ಸಿವಿಲ್ ಕೋರ್ಟ್ ಮನೀಶ್ ಕಶ್ಯಪ್ ಮತ್ತು ಇತರ ಇಬ್ಬರನ್ನು ಖುಲಾಸೆಗೊಳಿಸಿದೆ.
ಬಿಹಾರ ಪೊಲೀಸ್ ಆರ್ಥಿಕ ಅಪರಾಧಗಳ ಘಟಕವು ನಕಲಿ ವಿಡಿಯೋ ಕುರಿತು ಪ್ರಕರಣ ದಾಖಲಿಸಿತ್ತು. ಖುಲಾಸೆ ಬಳಿಕ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಡಿರುವ ಕಶ್ಯಪ್, “ಸೋಷಿಯಲ್ ಮೀಡಿಯಾದಲ್ಲಿ ನನ್ನ ಮಾನಹಾನಿ ಮಾಡಲು ಯತ್ನಿಸಿದವರು ಈಗ ಒಂದು ಸಣ್ಣ ವೀಡಿಯೊ ಅಥವಾ ಪೋಸ್ಟ್ ಅನ್ನು ಅಪ್ಲೋಡ್ ಮಾಡುತ್ತಾರೆ ಹಾಗು ಬಿಹಾರ ಮತ್ತು ದೇಶದಲ್ಲಿ ಈ ಪ್ರಕರಣದ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಬರೆದಿದ್ದಾರೆ.
ಮನೀಶ್ ಕಶ್ಯಪ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಹಾರದಿಂದ ಬಂದಿದ್ದ ವಲಸೆ ಕಾರ್ಮಿಕರ ವಿರುದ್ಧ ತಮಿಳುನಾಡಿನಲ್ಲಿ ನಡೆದಿದೆ ಎನ್ನಲಾದ ಹಿಂಸಾಚಾರವನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದರು.
ವಿಡಿಯೋ ವೈರಲ್ ಆಗಿ ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲಾಗಿತ್ತು. ಇದರಿಂದ ಮನೀಶ್ಗೆ ಕಾನೂನು ತೊಡಕು ಎದುರಾಗಿತ್ತು. ವೀಡಿಯೊ ವೈರಲ್ ಆದ ನಂತರ, ತಮಿಳುನಾಡು ಪೊಲೀಸರು ಅದನ್ನು ನಕಲಿ ಎಂದು ಹೇಳಿ ಕಶ್ಯಪ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚುವರಿಯಾಗಿ, ಬಿಹಾರ ಪೊಲೀಸ್ನ ಆರ್ಥಿಕ ಅಪರಾಧಗಳ ಘಟಕವೂ ವಿಡಿಯೋ ಕುರಿತು ಪ್ರಕರಣ ದಾಖಲಿಸಿತ್ತು.
ಪೊಲೀಸರು ಪ್ರಕರಣಗಳನ್ನು ದಾಖಲಿಸಿದ ನಂತರ, ಮನೀಶ್ ಕಶ್ಯಪ್ ಹಲವು ದಿನಗಳಿಂದ ನಾಪತ್ತೆಯಾಗಿದ್ದರು. ಈ ವೇಳೆ ಅವರ ಮನೆಯನ್ನೂ ಜಪ್ತಿ ಮಾಡಲಾಗಿತ್ತು. ಮಾರ್ಚ್ 18, 2023 ರಂದು ಜಪ್ತಿ ವೇಳೆ ಕಶ್ಯಪ್ ಶರಣಾದರು. ಬಿಹಾರ ಪೊಲೀಸ್ ತಂಡ ಆತನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿತು, ನಂತರ ತಮಿಳುನಾಡು ಪೊಲೀಸರು ಆತನನ್ನು ತಮ್ಮೊಂದಿಗೆ ಕರೆದೊಯ್ದರು. ಜಾಮೀನು ಪಡೆದು ಬಿಡುಗಡೆಯಾಗುವ ಮೊದಲು ಕಶ್ಯಪ್ ಸುಮಾರು ಒಂಬತ್ತು ತಿಂಗಳು ಜೈಲಿನಲ್ಲಿ ಕಳೆದರು.
ಮನೀಶ್ ಕಶ್ಯಪ್ ಇತ್ತೀಚೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ್ದರು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಪಕ್ಷಕ್ಕೆ ಸೇರುವ ಮೊದಲು, ಕಶ್ಯಪ್ ಪಶ್ಚಿಮ ಚಂಪಾರಣ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಪ್ರಕಟಿಸಿದ್ದರು. ಆದರೆ ಪಕ್ಷದ ಸದಸ್ಯರಾದ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದರು.