ಮಣಿಪುರದಲ್ಲಿ ಸ್ತ್ರೀಯರ ನಗ್ನ ಮೆರವಣಿಗೆ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಕೃತ್ಯದ ಮಾಸ್ಟರ್ ಮೈಂಡ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಘಟನೆಗೆ ಮಣಿಪುರದಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು, ಆರೋಪಿ ಮನೆಗೆ ಬೆಂಕಿ ಇಟ್ಟು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುರಾಚಂದ್ ಪುರ ಗ್ರಾಮದ ಪ್ರಮುಖ ಆರೋಪಿ ಹುಯಿರೆಮ್ ಹೆರೋಡಾಸ್ ಮನೆಗೆ ಸ್ಥಳೀಯರು ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಣಿಪುರದಲ್ಲಿ ಸ್ತ್ರೀಯರ ನಗ್ನ ಮೆರವಣಿಗೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಪ್ರಧಾನಿ ಮೋದಿ ಖಂಡಿಸಿ ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆ ಬಳಸಿಕೊಂಡು ವಿಡಿಯೋ ದಲ್ಲಿದ್ದ ನಾಲ್ವರನ್ನು ಬಂಧಿಸಲಾಗಿದೆ. ಮಾಸ್ಟರ್ ಮೈಂಡ್ ಎನ್ನಲಾದ ಹುಯಿರಿಮ್ ಹೆರಾದಶ್ (32) ಎಂಬಾತ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ಮುಂದುವರೆದಿದ್ದು, ಅವರು ನೀಡುವ ಸುಳಿವು ಆಧರಿಸಿ ಇನ್ನಷ್ಟು ಜನರನ್ನು ಶೀಘ್ರವೇ ಬಂಧಿಸಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 4 ರಂದು ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ವಿಡಿಯೋ ಬುಧವಾರ ಬಹಿರಂಗವಾಗಿದ್ದು, ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈಶಾನ್ಯ ರಾಜ್ಯದಲ್ಲಿ ಕಾದಾಡುತ್ತಿರುವ ಸಮುದಾಯಗಳ ಇಬ್ಬರು ಮಹಿಳೆಯರನ್ನು ಇನ್ನೊಂದು ಬದಿಯ ಜನಸಮೂಹವು ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ. ಬಹುಸಂಖ್ಯಾತ ಸಮುದಾಯವನ್ನು ಒಳಗೊಂಡಿರುವ ಜನಸಮೂಹದಿಂದ ಬಿಡುಗಡೆ ಮಾಡುವ ಮೊದಲು ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿರೇನ್ ಸಿಂಗ್, ಇಬ್ಬರು ಅಪರಾಧಿಗಳನ್ನು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇದು ಮಾನವೀಯತೆಯ ವಿರುದ್ಧದ ಅಪರಾಧ. ಎಲ್ಲಾ ಆರೋಪಿಗಳಿಗೆ ಮರಣದಂಡನೆ ವಿಧಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ವಿಡಿಯೋ ನೋಡಿದ ತಕ್ಷಣ ಅಪರಾಧಿಗಳ ಹುಡುಕಾಟ ಪ್ರಾರಂಭವಾಗಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.