ಹಿಂಸಾಚಾರ ಪೀಡಿತ ಮಣಿಪುರದ ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ಮೂವರಿದ್ದ ಆಂಬ್ಯುಲೆನ್ಸ್ ಗೆ ಗುಂಪೊಂದು ಬೆಂಕಿ ಹಚ್ಚಿದ್ದು, 8 ವರ್ಷದ ಬಾಲಕ, ಆತನ ತಾಯಿ ಮತ್ತು ಇನ್ನೊಬ್ಬ ಸಂಬಂಧಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಸಂಜೆ ಐರೋಸೆಂಬಾದಲ್ಲಿ ಘಟನೆ ಸಂಭವಿಸಿದ್ದು, ಶೂಟೌಟ್ ನಲ್ಲಿ ಬಾಲಕನ ತಲೆಗೆ ಗುಂಡು ತಗುಲಿದ ನಂತರ ಆತನ ತಾಯಿ ಮತ್ತು ಅವರ ಸಂಬಂಧಿ ಇಂಫಾಲ್ ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಗುಂಪೊಂದು ಬೆಂಕಿ ಹಚ್ಚಿದೆ.
ಮೃತರನ್ನು ಟಾನ್ಸಿಂಗ್ ಹ್ಯಾಂಗ್ಸಿಂಗ್(8), ಆತನ ತಾಯಿ ಮೀನಾ ಹ್ಯಾಂಗ್ಸಿಂಗ್(45) ಮತ್ತು ಸಂಬಂಧಿ ಲಿಡಿಯಾ ಲೌರೆಂಬಾಮ್(37) ಎಂದು ಗುರುತಿಸಲಾಗಿದೆ.
ಬುಡಕಟ್ಟು ಸಮುದಾಯದ ತೋನ್ಸಿಂಗ್ ಮತ್ತು ಅವನ ತಾಯಿ ಕಾಂಗ್ ಚುಪ್ ನಲ್ಲಿರುವ ಅಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿ ತಂಗಿದ್ದರು. ಜೂನ್ 4 ರಂದು ಸಂಜೆ ಶಿಬಿರದ ಪ್ರದೇಶದಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಗಿ ಶಿಬಿರದಲ್ಲಿದ್ದ ಬಾಲಕನಿಗೆ ಗುಂಡು ತಗುಲಿತ್ತು.
ಅಸ್ಸಾಂ ರೈಫಲ್ಸ್ ಹಿರಿಯ ಅಧಿಕಾರಿಯೊಬ್ಬರು ತಕ್ಷಣವೇ ಇಂಫಾಲ್ ನಲ್ಲಿ ಪೊಲೀಸರೊಂದಿಗೆ ಮಾತನಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಐಸೊಸೆಂಬಾದಲ್ಲಿ ಆಂಬ್ಯುಲೆನ್ಸ್ ಸಂಚರಿಸುವಾಗ ಜನರ ಗುಂಪು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ವಾಹನದಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ.