ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕೇಂದ್ರ ಸಚಿವ ರಂಜನ್ ಸಿಂಗ್ ಅವರ ಮನೆ ಮೇಲೆ 2 ತಿಂಗಳ ಅವಧಿಯಲ್ಲಿ ಎರಡನೇ ಬಾರಿ ದಾಳಿ ನಡೆದಿದೆ.
ಕೇಂದ್ರ ಸಚಿವ ಆರ್.ಕೆ. ರಂಜನ್ ಸಿಂಗ್ ಅವರ ಇಂಫಾಲ್ ನಿವಾಸದ ಮೇಲೆ ಎರಡು ತಿಂಗಳ ನಂತರ ಎರಡನೇ ಬಾರಿಗೆ ದಾಳಿ ನಡೆಸಲಾಗಿದೆ. ಜನಾಂಗೀಯ ಕಲಹ ಪೀಡಿತ ರಾಜ್ಯದ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕು, ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಲು ಒತ್ತಾಯಿಸಿ ರ್ಯಾಲಿ ಕೈಗೊಂಡಿದ್ದು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ದಾಳಿಯ ವೇಳೆ ಸಚಿವರ ಮನೆಯಲ್ಲಿ ಯಾರೂ ಇರಲಿಲ್ಲ. ಹೆಚ್ಚಿನ ಹಾನಿಯಾಗಿಲ್ಲ.
ಇಂಫಾಲ್ ಪಟ್ಟಣದ ಕೊಂಗ್ಬಾ ಪ್ರದೇಶದ ಮನೆಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ರಾಜ್ಯದ ಪರಿಸ್ಥಿತಿಯ ಬಗ್ಗೆ ಸಚಿವರು ಸಂಸತ್ತಿನಲ್ಲಿ ಮಾತನಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ನಾವು ಇಂಟರ್ನೆಟ್ ಸೇವೆಗಳನ್ನು ಮರಳಿ ಬಯಸುತ್ತೇವೆ. ನಮಗೆ ಏನಾಗುತ್ತಿದೆ ಎಂಬುದನ್ನು ನಾವು ಜನರಿಗೆ ಹೇಳಲು ಬಯಸುತ್ತೇವೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ಇದಕ್ಕೂ ಮುನ್ನ ಜೂನ್ 15 ರಂದು, ಗುಂಪೊಂದು ಸಚಿವರ ನಿವಾಸದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ ನಂತರ ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯ ಯತ್ನಗಳನ್ನು ನಿಯಂತ್ರಿಸಿ ಮನೆಯನ್ನು ಉಳಿಸುವಲ್ಲಿ ಯಶಸ್ವಿಯಾದರು.