ನಾಗಪುರ: ಕಳೆದು ಒಂದು ವರ್ಷದಿಂದ ಮಣಿಪುರದಲ್ಲಿ ತಲೆದೋರಿರುವ ಜನಾಂಗೀಯ ಹಿಂಸಾಚಾರ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಒತ್ತಾಯಿಸಿದ್ದಾರೆ.
ನಾಗಪುರದಲ್ಲಿ ನಡೆದ ಆರ್.ಎಸ್.ಎಸ್. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10 ವರ್ಷಗಳಿಂದ ಮಣಿಪುರ ಶಾಂತಿಯುತವಾಗಿತ್ತು. ಕಳೆದ ಒಂದು ವರ್ಷದಿಂದ ದಿಢೀರನೆ ಬಂದೂಕು ಸಂಸ್ಕೃತಿ ತಲೆ ಎತ್ತಿದೆ. ಆದ್ಯತೆ ಮೇರೆಗೆ ಅದನ್ನು ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಮಹತ್ವದ್ದು ಮತ್ತು ಅತ್ಯಗತ್ಯವಾಗಿದೆ. ಚರ್ಚೆಗಳು ಹದ್ದು ಮೀರಬಾರದು. ಈ ಬಾರಿಯೂ ಆರ್.ಎಸ್.ಎಸ್.ನಂತಹ ಸಂಘಟನೆಯನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯಲಾಗಿದೆ. ಇದು ತಪ್ಪು ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳಾಗಿದ್ದು, ಮತ್ತೆ ಅದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಎಲ್ಲಾ ಸವಾಲುಗಳಿಂದ ನಾವು ಮುಕ್ತರಾಗಿದ್ದೇವೆ ಎಂದು ಅರ್ಥವಲ್ಲ. ಮಣಿಪುರದಲ್ಲಿ ಹಿಂಸಾಚಾರದಿಂದ ಶಾಂತಿ ನೆಲೆಸಿಲ್ಲ. ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಚುನಾವಣೆ ಗುಂಗಿನಿಂದ ಹೊರಬಂದು ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಬೇಕು. ಮಣಿಪುರದಲ್ಲಿ ಪರಿಸ್ಥಿತಿ ತಿಳಿಗೊಳಿಸಿ ಆದ್ಯತೆ ಮೇರೆಗೆ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.