ಇಂಫಾಲ್: ಮಣಿಪುರದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ್ದ ಆಘಾತಕಾರಿ ಘಟನೆ ಬಳಿಕ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಚಿತ್ರ ಬಿಡುಗಡೆ ಮಾಡಲಾಗಿದೆ.
ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಮಣಿಪುರದಲ್ಲಿ ನಡೆದಿತ್ತು. ಮಹಿಳೆಯರಿಬ್ಬರನ್ನು ಬೆತ್ತಲುಗೊಳಿಸಿ, ಮೆರವಣಿಗೆ ಮಾಡಿದ್ದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎರಡು ತಿಂಗಳ ಹಿಂದೆ ನಡೆದಿದೆ ಎನ್ನಲಾದ ಈ ಘಟನೆಯ ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ವಿಡಿಯೋದಲ್ಲಿ ಕಂಡುಬಂದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಇಬ್ಬರು ಮಹಿಳೆಯರನ್ನು ಹಿಡಿದುಕೊಂಡು ಬಂದಿದ್ದ ಗುಂಪಿನಲ್ಲಿ ಒಬ್ಬಾತ ಮಹಿಳೆಯನ್ನು ಹಿಡಿದುಕೊಂಡಿದ್ದ. ಈತನನ್ನು 32 ವರ್ಷದ ಹುಯಿರೆಮ್ ಹೆರೋಡಾಸ್ ಮೈತೇಯಿ ಎಂದು ಗುರುತಿಸಲಾಗಿದ್ದು, ಈಗಾಗಲೇ ಬಂಧಿಸಲಾಗಿದೆ. ತೌಬಲ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಶಾಮೀಲಾದ ಎಲ್ಲರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಪ್ರಸ್ತುತ ಸಂಪೂರ್ಣ ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಯೋಜಿಸುತ್ತಿದೆ. ಹಾಗೂ ಎಲ್ಲಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಅಮಾನವೀಯ ಘಟನೆ ಸಂಭವಿಸಿದೆ.