ಇಂಫಾಲ: ಮಣಿಪುರದ ಐವರು ಜೆಡಿಯು ಶಾಸಕರು ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. ಮಣಿಪುರದ ಜನತಾ ದಳ-ಯುನೈಟೆಡ್ (ಜೆಡಿ-ಯು) ಶಾಸಕರ ಪೈಕಿ ಐವರು ಶುಕ್ರವಾರ ರಾತ್ರಿ ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷಕ್ಕೆ ಐವರು ಜೆಡಿ-ಯು ಶಾಸಕರ ವಿಲೀನವನ್ನು ಸ್ಪೀಕರ್ ತೊಕ್ಚೋಮ್ ಸತ್ಯಬ್ರತ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ಮಣಿಪುರ ವಿಧಾನಸಭೆ ಕಾರ್ಯದರ್ಶಿ ಕೆ. ಮೇಘಜಿತ್ ಸಿಂಗ್ ತಿಳಿಸಿದ್ದಾರೆ.
ಖುಮುಚ್ಚಮ್ ಜೋಯ್ಕಿಸನ್ ಸಿಂಗ್(ತಂಗ್ಮೇಬಾಂಡ್), ನ್ಗುರ್ಸಂಗ್ಲೂರ್ ಸನತೆ(ತಿಪೈಮುಖ), ಎಂಡಿ ಅಚಾಬ್ ಉದ್ದೀನ್(ಜಿರಿಬಾಮ್), ತಂಗ್ಜಮ್ ಅರುಣ್ಕುಮಾರ್(ವಾಂಗ್ಖೈ) ಮತ್ತು ಎಲ್.ಎಂ.ಖೌಟೆ(ಚುರಾಚಂದಪುರ) ಬಿಜೆಪಿಗೆ ಸೇರ್ಪಡೆಯಾದ ಐವರು ಶಾಸಕರಾಗಿದ್ದಾರೆ.
ಫೆಬ್ರವರಿ-ಮಾರ್ಚ್ ವಿಧಾನಸಭಾ ಚುನಾವಣೆಯಲ್ಲಿ, ಜೆಡಿ-ಯು 60 ಸದಸ್ಯರ ವಿಧಾನಸಭೆಯಲ್ಲಿ 6 ಸ್ಥಾನಗಳನ್ನು ಗೆದ್ದಿತ್ತು. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿತ್ತು.
ಲಿಲಾಂಗ್ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಎಂ.ಡಿ.ನಾಸಿರ್ ಬಿಜೆಪಿ ಸೇರದ ಶಾಸಕ. ಜೆಡಿಯು ಶಾಸಕರ ನಿರ್ಧಾರವನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.