ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲಾಯಿತು ಎಂದು ಸಿಪಿಐ ಚಾರ್ಜ್ ಶೀಟ್ ಸಲ್ಲಿಸಿದೆ.
ಕಾಂಗ್ ಪೋಪಿ ಜಿಲ್ಲೆಯಲ್ಲಿ ಪೊಲೀಸ್ ವಾಹನದಲ್ಲಿ ಆಶ್ರಯ ಪಡೆದುಕೊಂಡಿದ್ದ ಕುಕಿ- ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಮಣಿಪುರ ಪೊಲೀಸ್ ಸಿಬ್ಬಂದಿ ಸುಮಾರು ಒಂದು ಸಾವಿರ ಮೈಥಿ ಸಮುದಾಯದ ಗಲಭೆ ಕೋರರ ಗುಂಪಿನ ಬಳಿಗೆ ಪೊಲೀಸರೇ ಬಿಟ್ಟಿದ್ದಾರೆ.
ಕಾರ್ಗಿಲ್ ಯುದ್ಧದ ಯೋಧನ ಪತ್ನಿಯಾಗಿದ್ದ ಮಹಿಳೆಯೊಬ್ಬರು ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ಪೋಲಿಸ್ ವಾಹನದ ಸಿಬ್ಬಂದಿಗೆ ಮನವಿ ಮಾಡಿದಾಗ ವಾಹನದ ಕೀ ಇಲ್ಲ ಎಂದು ಹೇಳಿದ ಅವರು ಸಂಕಷ್ಟದಲ್ಲಿದ್ದ ಮಹಿಳೆಯರಿಗೆ ಸಹಾಯ ಮಾಡದೇ ಗಲಭೆಕೋರರಿದ್ದ ಸ್ಥಳಕ್ಕೆ ಮಹಿಳೆಯರನ್ನು ತಂದು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಕಳೆದ ವರ್ಷ ಮೇ 4 ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಸುಮಾರು ಎರಡು ತಿಂಗಳ ನಂತರ ಜುಲೈನಲ್ಲಿ ಪುರುಷರ ಗುಂಪಿನಿಂದ ಸುತ್ತುವರಿದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು. ಕಳೆದ ವರ್ಷ ಅಕ್ಟೋಬರ್ 16 ರಂದು ಗುವಾಹಟಿಯ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಮುಂದೆ ಸಿಬಿಐ ಆರು ಆರೋಪಿಗಳ ವಿರುದ್ಧ ಮತ್ತು ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಬಾಲಕನ ವಿರುದ್ಧ(CCL) ವರದಿಯನ್ನು ಸಲ್ಲಿಸಿತು.
AK ರೈಫಲ್ಸ್, SLR, INSAS ಮತ್ತು .303 ರೈಫಲ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸುಮಾರು 900-1,000 ಜನರ ಗುಂಪು ಸೈಕುಲ್ ಪೊಲೀಸ್ ಠಾಣೆಯಿಂದ ದಕ್ಷಿಣಕ್ಕೆ 68 ಕಿಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ ಜಿಲ್ಲೆಯ ಗ್ರಾಮಕ್ಕೆ ನುಗ್ಗಿದಾಗ ಮಹಿಳೆಯರು ಸೇರಿ ಜನ ತಪ್ಪಿಸಿಕೊಳ್ಳಲು ಕಾಡಿಗೆ ಓಡಿಹೋದರು. ಆದರೆ ಅವರು ಗುಂಪಿನಿಂದ ಬೇರೆಯಾಗಿ ಸಹಾಯ ಪಡೆಯಲು ರಸ್ತೆಬದಿಯಲ್ಲಿ ನಿಂತಿದ್ದ ಪೊಲೀಸ್ ವಾಹನ ಹತ್ತಿ ಆಶ್ರಯ ಪಡೆದಿದ್ದಾರೆ. ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲು ಪೊಲೀಸರಿಗೆ ಮನವಿ ಮಾಡಿದ್ದರೂ, ಅವರು ನೆರವಾಗಲಿಲ್ಲ. ಗಲಭೆಕೋರರಿದ್ದ ಸ್ಥಳಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ, ಮಹಿಳೆಯ ಮಾನಹಾನಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.