ಕಲಬುರ್ಗಿ: ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಅಪಘಾತವನ್ನು ಕೊಲೆಯತ್ನ ಎಂದು ಬಿಂಬಿಸಿ ಸುಳ್ಳು ಆರೋಪ ಮಾಡಿದ್ದ ಮಣಿಕಂಠ ರಾಠೋಡ್, ಇಂದು ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ನಡೆಸಿದ್ದರು. ಸುದ್ದಿಗೋಷ್ಠಿಗೂ ಮೊದಲೇ ಕಲಬುರ್ಗಿ ನಗರ ಚೌಕ್ ಪೊಲೀಸರು ರಾಠೋಡ್ ನನ್ನು ವಶಕ್ಕೆ ಪಡೆದಿದ್ದಾರೆ.
ಕಲಬುರ್ಗಿಯ ಭಾರತ್ ಪ್ರೈಡ್ ಅಪಾರ್ಟ್ ಮೆಂಟ್ ಫ್ಲ್ಯಾಟ್ ನಲ್ಲಿ ಮಣಿಕಂಠ ರಾಠೋಡ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ದುಷ್ಕರ್ಮಿಗಳು ತನ್ನ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರಿಗೆ ತನಿಖೆ ವೇಳೆ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ನಡೆದಿಲ್ಲ. ಅಪಘಾತ ಪ್ರಕರಣವನ್ನು ಹಲ್ಲೆ ಎಂದು ಸುಳ್ಳು ಆರೋಪ ಮಾಡಿ ಕೊಲೆಯತ್ನ ಎಂದು ಬಿಂಬಿಸಲು ಹೊರಟಿರುವುದು ಬಯಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಲು ರಾಠೋಡ್ ಮುಂದಾಗಿದ್ದು, ಅದಕ್ಕೂ ಮುನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.