ಬೆಂಗಳೂರು: ಗ್ರಾಹಕರ ಮನೆ ಬಾಗಿಲಿಗೆ ಮಾವಿನಹಣ್ಣು ಪೂರೈಸಲು ಅಂಚೆ ಇಲಾಖೆ ಮುಂದಾಗಿದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಂಚೆ ಇಲಾಖೆಯೊಂದಿಗೆ ಈ ಕುರಿತಾಗಿ ಒಪ್ಪಂದ ಮಾಡಿಕೊಂಡಿದೆ.
ಸಾಂಕೇತಿಕವಾಗಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಹಣ್ಣುಗಳು ಬಂದ ನಂತರ ಗ್ರಾಹಕರಿಂದ ಬುಕಿಂಗ್ ಆರಂಭವಾಗಲಿದೆ. ಏಪ್ರಿಲ್ ಕೊನೆಯ ವಾರದ ವೇಳೆಗೆ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ಪೂರೈಸಲಾಗುವುದು. ಫಸಲು ಬಂದ ನಂತರ ರೈತರು ವೆಬ್ ಪೋರ್ಟಲ್ ಗೆ ನೋಂದಣಿ ಮಾಡಿಕೊಳ್ಳಬೇಕು.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಣ್ಣು ಪೂರೈಕೆ ಮಾಡಲಾಗುವುದು. ಆನ್ಲೈನ್ ನಲ್ಲಿ ಮಾವಿನ ಹಣ್ಣು ಬುಕ್ ಮಾಡಿದರೆ ಅಂಚೆ ಇಲಾಖೆ ಸಿಬ್ಬಂದಿ ಮನೆಗೆ ತಲುಪಿಸುತ್ತಾರೆ. ರೈತರು ಪ್ಯಾಕ್ ಮಾಡಿಕೊಡಬೇಕು. ಜೊತೆಗೆ ಬಾಕ್ಸ್ ಮೇಲೆ ಗ್ರಾಹಕರ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಬೇಕು.
karsirimangoes.karnataka.gov.in ಪೋರ್ಟಲ್ ನಲ್ಲಿ ಭೇಟಿ ನೀಡಿ ಹಣ್ಣುಗಳ ಬುಕಿಂಗ್ ಮಾಡಬಹುದಾಗಿದೆ. ಮೂರು ಕೆಜಿ ಹಾಗೂ ಮೇಲ್ಪಟ್ಟು ಮಾವಿನ ಹಣ್ಣುಗಳನ್ನು ಬುಕ್ ಮಾಡಬಹುದಾಗಿದೆ. ಪ್ರತಿ ಮೂರು ಕೆಜಿ ಬಾಕ್ಸ್ ನಲ್ಲಿ ಹಣ್ಣುಗಳ ಪಾರ್ಸೆಲ್ ಬರುತ್ತದೆ. ಬೆಂಗಳೂರಿನಲ್ಲಿ ಮಾತ್ರ ಸೇವೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.