
ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಕೇವಲ ತಿನ್ನುವುದಕ್ಕೆ ಅಷ್ಟೇ ಅಲ್ಲದೆ, ತ್ವಚೆಯ ಸೌಂದರ್ಯಕ್ಕೂ ಬಳಸಬಹುದು. ಮಾವಿನ ಹಣ್ಣಿನ ಕೆಲವು ಟಿಪ್ಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ.
* ಎಣ್ಣೆ ತ್ವಚೆಯುಳ್ಳವರು ಹುಳಿ ಮಾವಿನ ರಸವನ್ನು ಕ್ಲೆನ್ಸರ್ ನಂತೆ ಬಳಸಬಹುದು.
* ಮಿಶ್ರ ತ್ವಚೆ ಉಳ್ಳವರು ಮಾವಿನ ರಸಕ್ಕೆ ಸ್ವಲ್ಪ ಕಡಲೆಹಿಟ್ಟು ಮತ್ತು ಜೇನುತುಪ್ಪ ಬೆರೆಸಿ ಫೇಸ್ ಪ್ಯಾಕ್ ಹಾಕಿಕೊಳ್ಳಬಹುದು. ಪ್ಯಾಕ್ ಕೊಂಚ ಒಣಗಿದಂತಾದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿದರೆ ತ್ವಚೆ ಕಾಂತಿಯುಕ್ತವಾಗುವುದು.
* ಮೊಡವೆ ಸಮಸ್ಯೆ ಇರುವವರು, ಅಗತ್ಯಕ್ಕೆ ತಕ್ಕಷ್ಟು ಮಾವಿನ ತಿರುಳು, ಸ್ವಲ್ಪ ಕಸ್ತೂರಿ ಅರಿಶಿಣ ಹಾಗೂ ಮುಲ್ತಾನಿಮಿಟ್ಟಿಯನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಹಾಕಿಕೊಳ್ಳಬಹುದು. ಕೊಂಚ ಒಣಗಿದಂತಾದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಬಹುದು. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಪರಿಹಾರವಾಗುವುದು.
* ಬೇಸಿಗೆಯಲ್ಲಿ ಮುಖ ಹೆಚ್ಚಾಗಿ ಬೆವರುತ್ತಿದ್ದರೆ, ಕೊಂಚ ಮಾವಿನ ತಿರುಳು ಹಾಗೂ ತುಳಸಿ ರಸ ಬೆರೆಸಿ ಮಸಾಜ್ ಮಾಡಿ. ಐದು ನಿಮಿಷ ನಂತರ ಮುಖ ತೊಳೆದಲ್ಲಿ ಮುಖ ಆಕರ್ಷಕವಾಗಿ ಕಾಣುವುದು.
* ಚರ್ಮ ಟ್ಯಾನ್ ಆಗಿದ್ದಲ್ಲಿ ಹುಳಿಮಾವಿನ ತಿರುಳು, ಒಂದೆರೆಡು ಬಾದಾಮಿ ಪೇಸ್ಟ್ ಹಾಗೂ ಹಾಲಿನ ಕೆನೆಯನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿ. ಹರ್ಬಲ್ ಬ್ಲೀಚ್ ತಯಾರಾಗುತ್ತದೆ. ಇದನ್ನು ಮುಖ, ಕೈ, ಕಾಲು, ಬೆನ್ನು ಕುತ್ತಿಗೆಗೆ ಹಚ್ಚಿ 20 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆದಲ್ಲಿ ಕಾಲ ಕ್ರಮೇಣ ಚರ್ಮ ಸರಿ ಹೋಗುವುದು.
* ಕೂದಲು ಉದುರುವ ಸಮಸ್ಯೆಯಿದ್ದಲ್ಲಿ, ಮಾವಿನ ರಸ, ದಾಸವಾಳದ ಎಲೆ ಮತ್ತು ನುಗ್ಗೆಸೊಪ್ಪನ್ನು ಒಟ್ಟಿಗೆ ಅರೆದು ಕೂದಲಿನ ಬುಡಕ್ಕೆ ಹಚ್ಚಿ 15 ನಿಮಿಷದ ನಂತರ ವಾಶ್ ಮಾಡಿ. ಇದನ್ನು ರೂಢಿಸಿಕೊಂಡಲ್ಲಿ ಕ್ರಮೇಣ ಕೂದಲು ಉದುರುವುದು ಕಡಿಮೆಯಾಗುವುದು.