
ಮಂಗಳೂರು: ಇನ್ ಸ್ಟಾಗ್ರಾಂ ಮೂಲಕ ಪರಿಚಯನಾದ ಕಿರಾತಕನೊಬ್ಬ, ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಖಾಸಗಿ ಫೋಟೋಗಳನ್ನು ವೈರಲ್ ಮಾಡಿ ಒಂದವರೆ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಇನ್ಸ್ ಸ್ಟಾಗ್ರಾಂ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಪರಿಚಯನಾದ ರಾಯಚೂರು ಮೂಲದ ಯಮನೂರ ಎಂಬ ಯುವಕ ತಾನು ವಾಮಂಜೂರು ಪೊಲೀಸ್ ಠಾಣೆಯ ಪಿಎಸ್ ಐ ಎಂದು ಹೇಳಿಕೊಂಡಿದ್ದಾನೆ. ನಿನ್ನ ಮನೆಯವರಿಗೂ ಕೆಲಸ ಕೊಡಿಸುವುದಾಗಿ ಹೇಳಿ ಮನೆಯವರ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಕೆಲ ದಿನಗಳಲ್ಲೇ ತಣ್ಣೀರುಬಾವಿ ಬಳಿ ಬೀಚ್ ಬಳಿ ಬರುವಂತೆ ವಿದ್ಯಾರ್ಥಿನಿಯನ್ನು ಕರೆದ ಭೂಪ ಆಕೆಯ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಈ ಫೋಟೋಗಳ ಮೂಲಕ ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಬೆಂಗಳೂರಿಗೆ ಕರೆದೊಯ್ದಿದ್ದು, ನೆಲಮಂಗಲದ ಲಾಡ್ಜ್ ನಲ್ಲಿ ಅತ್ಯಾಚಾರವೆಸಗಿದ್ದಾನೆ.
ಬಳಿಕ ಮುಲ್ಕಿಯ ಕಿನ್ನಿಗೋಳಿ ಲಾಡ್ಜ್ ಗೂ ವಿದ್ಯಾರ್ಥಿನಿಯನ್ನು ಕರೆದೊಯ್ದು ಅಲ್ಲಿಯೂ ಅತ್ಯಾಚಾರವೆಸಗಿರುವ ಕಿರಾತಕ ಆಕೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿದ್ದಾನೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಆಕೆಯ ಸ್ನೇಹಿತರು, ಕುಟುಂಬದವರಿಗೆ ಫೋಟೋ ಕಳುಹಿಸಿದ ವ್ಯಕ್ತಿ ಫೋಟೋ ಡಿಲಿಟ್ ಮಾಡಬೇಕು ಎಂದರೆ ಒಂದುವರೆ ಲಕ್ಷ ಹಣ ನೀಡುವಂತೆ ಕೇಳಿದ್ದಾನೆ.
ಸಂತ್ರಸ್ತ ಯುವತಿ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಯಮನೂರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.