ಮಂಗಳೂರು: ರೈಲು ಹಳಿ ತಪ್ಪಿಸುವ ಯತ್ನಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಮಂಗಳೂರಿನಲ್ಲಿಯೂ ಇಂತದ್ದೇ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿನಿಂದ ಕೇರಳಕ್ಕೆ ಹೋಗುವ ರೈಲು ಮಾರ್ಗದಲ್ಲಿ ಉಳ್ಳಾಲದ ಬಳಿ ರೈಲ್ವೆ ಹಳಿಗಳ ಮೇಲೆ ಜಲ್ಲಿಕಲ್ಲುಗಳನ್ನು ಸುರಿಯಲಾಗಿದೆ. ರೈಲುಗಳು ಚಲಿಸುವ ವೇಳೆ ದೊಡ್ಡ ಸದ್ದು ಕೇಳಿ ಸ್ಥಳೀಯರಿಗೆ ಆತಂಕ ಉಂಟಾಗಿದೆ. ಕೆಲವರು ಭೂಕಂಪವಿರಬಹುದು ಎಂದುಕೊಂಡಿದ್ದಾರೆ.
ತೊಕ್ಕೊಟ್ಟುವಿನ ರೈಲ್ವೆ ಹಳಿ ಬಳಿ ಈ ಘಟನೆ ನಡೆದಿದೆ. ರೈಲ್ವೆ ಹಳಿ ಕಡೆಯಿಂದಲೇ ಭಾರಿ ಶಬ್ಧ ಕೇಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ರೈಲು ಹಳಿಗಳ ಮೇಲೆ ಜಲ್ಲಿ ಕಲ್ಲು ಸುರಿದಿರುವುದು ಕಂಡುಬಂದಿದೆ.
ತಕ್ಷಣ ಸ್ಥಳೀಯರು ರೈಲ್ವೆ ಪೊಲೀಸರು ಹಾಗೂ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಕೆಲವೆಡೆ ರೈಲು ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ಕಿಡಿಗೇಡಿಗಳು ರೈಲು ಹಳಿ ತಪ್ಪಿಸಲು ಯತ್ನ ನಡೆಸಿದ್ದರು. ಈ ಘಟನೆ ಬೆನ್ನಲ್ಲೇ ದೇಶದ ವಿವಿಧೆಡೆ ಇಂತಹ ಘಟನೆ ಬೆಳಕಿಗೆ ಬಂದಿದ್ದು, ಲೋಕೋಪೈಲಟ್ ಸಮಯ ಪ್ರಜ್ಞೆಯಿಂದ ಅನಾಹುತಗಳು ತಪ್ಪಿದ್ದವು. ಇದೀಗ ಮಂಗಳೂರಿನಲ್ಲಿಯೀ ಇಂತಹ ಘಟನೆ ನಡೆದಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.