ಮಂಗಳೂರು: ಮಂಗಳೂರಿನಲ್ಲಿ ಕಾಲೇಜ್ ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೇಶ್ಯವಾಟಿಕೆ ನಡೆಸುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುತ್ತಿದ್ದ ಕುಟುಂಬದ ಮೂವರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ತಂದೆ, ತಾಯಿಯ ದಂಧೆಗೆ ಮಗನೇ ಸಾಥ್ ಕೊಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಶಮಿನಾ, ಪತಿ ಸಿದ್ದಿಕ್, ಮಗ ಸಫ್ವಾನ್, ಆಯೆಶಾಮ್ಮಿ ಎಂಬುವರನ್ನು ಬಂಧಿಸಲಾಗಿದೆ.
ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ಆರೋಪಿಗಳು ಯುವತಿಯರಿಗೆ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದರು. ಯುವಕರನ್ನು ಬಿಟ್ಟು ಪ್ರೀತಿ-ಪ್ರೇಮ ಎಂದು ನಂಬಿಸಿ, ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ನೂಕುತ್ತಿದ್ದರು.
ಪೆಂಟ್ ಹೌಸ್ ಗೆ ಬರುತ್ತಿದ್ದ ವಿದ್ಯಾರ್ಥಿನಿಯರ ದೃಶ್ಯಗಳು ಸಿಸಿಟಿವಿ, ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು. ಗ್ರಾಹಕರೊಂದಿಗೆ ರೂಮ್ ಒಳಗೆ ಹೋಗುವ ದೃಶ್ಯಗಳನ್ನು ಸೆರೆಹಿಡಿದು ಬೇರೆ ಹುಡುಗಿಯರನ್ನು ಕರೆತರದಿದ್ದರೆ ನಿಮ್ಮ ವಿಡಿಯೋವನ್ನು ಪೋಷಕರಿಗೆ ತೋರಿಸುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದರು.
ಗಿರಾಕಿಗಳ ಬೇಡಿಕೆಗೆ ತಕ್ಕಂತೆ ಹುಡುಗಿಯರನ್ನು ಖೆಡ್ಡಾಗೆ ಬೀಳಿಸುತಿದ್ದರು. ಕೇರಳದಿಂದ ಬರುವವರಿಗೆ ಮಾತ್ರ ಪೆಂಟ್ ಹೌಸ್ ಗೆ ಎಂಟ್ರಿ ಇರುತ್ತಿತ್ತು. ಸ್ಥಳೀಯರಿಗೆ ಪ್ರವೇಶ ಇರಲಿಲ್ಲ. ಮಂಗಳೂರಿನ ಒಂದೇ ಕುಟುಂಬದ ಈ ಮೂವರು ಹಾಗೂ ಕೇರಳದ ಆಯೇಶಾಮ್ಮಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಮಂಗಳೂರು ನಿವಾಸಿಗಳಾದ ಆರೋಪಿಗಳು ದಂಧೆ ನಡೆಸುತ್ತಿರುವ ಬಗ್ಗೆ, ಹಲವು ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿರುವ ಬಗ್ಗೆ ಮಾಹಿತಿ ತಿಳಿದ ಮಂಗಳೂರು ಪೊಲೀಸರು, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಡಿಸಿಪಿ ಹರಿರಾಮ್ ಶಂಕರ್ ಅವರು ಪ್ರಕರಣದ ನೇತೃತ್ವ ವಹಿಸಿದ್ದು, ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ತನಿಖೆ ಕೈಗೊಂಡಿದ್ದರು.
ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಲೆ ಬೀಸಿ ವೇಶ್ಯಾವಾಟಿಕೆಗೆ ನೂಕುತ್ತಿದ್ದರು. ಅವರ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿ ಬೇರೆ ಯುವತಿಯರನ್ನು ಕರೆತರುವಂತೆ ಒತ್ತಡ ಹೇರುತ್ತಿದ್ದರು. ಕೇರಳದಿಂದ ಆಯೇಶಾಮ್ಮಿ ಗಿರಾಕಿಗಳನ್ನು ಕಳಿಸುತ್ತಿದ್ದಳು ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.