ಮಂಗಳೂರು: ಇ- ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಗೆ ವಂಚಿಸಿದ ಆರೋಪಿಗಳಿಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ಬಹುರಾಜ್ಯ ಬಹು ಕೋಟಿ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ. ರಾಜಸ್ಥಾನದ ರಾಜಕುಮಾರ್ ಮೀನಾ(23), ಸುಭಾಷ್ ಗುರ್ಜರ್(27) ಬಂಧಿತ ಆರೋಪಿಗಳು. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ. ಉತ್ತರ ಪ್ರದೇಶ, ದೆಹಲಿ ಸೇರಿದಂತೆ 10 ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚನೆಯಲ್ಲಿ ಇವರು ಭಾಗಿಯಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳ ಬಂಧನ ಮಹತ್ವದ ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದ್ದಾರೆ. ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಗರಣದಲ್ಲಿ 11.45 ಲಕ್ಷ ರೂಪಾಯಿ ಮೌಲ್ಯದ ಆರ್ಡರ್ ಗಳು ನಕಲಿ ಎಂದು ಗುರುತಿಸಲಾಗಿದೆ.
ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಸುಳ್ಳು ವಿಳಾಸ ನೀಡಿ ದುಬಾರಿ ಬೆಲೆಯ ಕ್ಯಾಮರಾ ಇತರೆ ವಸ್ತುಗಳಿಗೆ ಆರ್ಡರ್ ನೀಡಲು ಅಮಿತ್ ಎಂಬ ಹೆಸರನ್ನು ಆರೋಪಿಗಳು ಬಳಸುತ್ತಿದ್ದರು. ವಸ್ತು ಡೆಲಿವರಿ ಆದ ಮೇಲೆ ಟ್ರ್ಯಾಕಿಂಗ್ ಲೇಬಲ್ ಗಳನ್ನು ಬದಲಿಸುತ್ತಿದ್ದರು. ಒಟಿಪಿ ತಪ್ಪಾಗಿ ಡೆಲಿವರಿ ವಿಳಂಬ ಎಂದು ತೋರಿಸುತ್ತಿದ್ದರು. ಬಳಿಕ ಆರ್ಡರ್ ಕ್ಯಾನ್ಸಲ್ ಮಾಡುತ್ತಿದ್ದರು. ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಂಡು ವಂಚಿಸುತ್ತಿದ್ದರು. ಬಳಿಕ ಸೆಕೆಂಡ್ ಹ್ಯಾಂಡ್ ಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರು.
ನಂತರ ಆರ್ಡರ್ ಗೆ ಬಳಸಿದ ಸಿಮ್ ಎಸೆಯುತ್ತಿದ್ದರು. ಬಾಕ್ಸ್ ಗಳು ಅಮೆಜಾನ್ ಗೋದಾಮಿಗೆ ವಾಪಸ್ ತಲುಪಿದ ಬಳಿಕ ವಂಚನೆ ಬಳಕೆಗೆ ಬರುತ್ತಿತ್ತು. ಬಾಕ್ಸ್ ಗಳನ್ನು ಪರೀಕ್ಷಿಸಿದಾಗ ಸ್ಟಿಕರ್ ಬದಲಾವಣೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಬಾಕ್ಸ್ ಗಳಲ್ಲಿದ್ದ ಕ್ಯಾಮರಾ ವಸ್ತುಗಳನ್ನು ತೆಗೆದುಕೊಂಡು ಅದರಲ್ಲಿ ಬೇರೆ ವಸ್ತುಗಳನ್ನು ಇಟ್ಟಿರುವುದು ತನಿಖೆಯಿಂದ ದೃಢಪಟ್ಟಿದೆ. 11.45 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.