ಮಂಗಳೂರು: ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ವಾಣಿಜ್ಯ, ವಹಿವಾಟು, ಜನವಸತಿ ಪ್ರದೇಶದ ಕಟ್ಟಡವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆನಂದ ಗಟ್ಟಿ ಬಂಧಿತ ಆರೋಪಿ ಎಂದು ಹೇಳಲಾಗಿದೆ. 400 ಕೆಜಿ ಸಲ್ಪರ್ ಪೌಡರ್, 30 ಕೆಜಿ ಲೆಡ್ ಬಾಲ್ಸ್, ಬೇರಿಯಂ ನೈಟ್ರೇಟ್, ಪೋಟ್ಯಾಶಿಯಂ ನೈಟ್ರೇಟ್, ವೈರ್ ಗಳು, 240 ಕೆಜಿ ಚಾರ್ಕೋಲ್, ಅಲ್ಯುಮಿನಿಯಂ ಪೌಡರ್ ಸೇರಿದಂತೆ ಸುಮಾರು 1500 ಕೆಜಿ ತೂಕದ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಡದಲ್ಲಿ ನಿಷೇಧಿತ ಸ್ಪೋಟಕ ಸಂಗ್ರಹಿಸಿದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಪರವಾನಿಗೆ ಇಲ್ಲದೆ ಈ ಸ್ಪೋಟಕ ಸಾಮಗ್ರಿಗಳನ್ನು ಸಂಗ್ರಹಿಸಿದ ಆನಂದ ಗಟ್ಟಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.