ಮಂಗಳೂರು: ವಾಟ್ಸಾಪ್ ಮೂಲಕ ಸಂಚಾರ ನಿಯಮ ಉಲ್ಲಂಘನೆ-ಎಪಿಕೆ (ಆಂಡ್ರ್ಯಾಯ್ಡ್ ಪ್ಯಾಕೇಜ್ ಕಿಟ್) ಫೈಲ್ ಕಳುಹಿಸಿದ್ದ ವಂಚಕನೊಬ್ಬ ವ್ಯಕ್ತಿಯೊಬ್ಬರ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರ ವಾಟ್ಸಪ್ ನಂಬರ್ ಗೆ ಅಪರಿಚಿತ ಸಂಖ್ಯೆಯಿಂದ VAHAN PARIVAHAN.apk ಎಂಬ ಫೈಲ್ ಬಂದಿದೆ. ವಾಹನ ಸಂಖ್ಯೆಯ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿರುವ ಮಾಹಿತಿ ಇತ್ತು. ವಾಟ್ಸಪ್ ಗೆ ಬಂದ ಸಂದೇಶ ನೋಡಿ ವ್ಯಕ್ತಿ ಫೈಲ್ ಡೌನ್ ಲೋಡ್ ಮಾಡಿದ್ದಾರೆ. ಡೌನ್ ಲೋಡ್ ಮಾಡುತ್ತಿದ್ದಂತೆ ಒಂದರಮೇಲೊಂದರಂತೆ 16 ಒಟಿಪಿಗಳು ಬಂದಿವೆ.
ಒಟಿಪಿ ಯಾರಿಗೂ ಶೇರ್ ಮಾಡಿಲ್ಲವಾದರೂ ಇದ್ದಕ್ಕಿದ್ದಂತೆ ವ್ಯಕ್ತಿಯ ಕ್ರೆಡಿಟ್ ಕಾರ್ಡ್ ನಿಂದ 30,400 ಹಾಗೂ ಡೆಬಿಟ್ ಕಾರ್ಡ್ ನಿಂದ 16,700 ರೂ ಹಾಗೂ 71,496 ರೂಪಾಯಿ ವರ್ಗಾವಣೆಯಾಗಿರುವ ಬಗ್ಗೆ ಮೆಸೇಜ್ ಬಂದಿದೆ. ಕಂಗಾಲಾದ ವ್ಯಕ್ತಿ ತಕ್ಷಣ ಆನ್ ಲೈನ್ ಮೂಲಕ ತಮ್ಮ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿದ್ದಾರೆ. ಹೀಗೆ ವ್ಯಕ್ತಿಯ ಖಾತೆಯಿಂದ ವಂಚಕ ಬರೋಬ್ಬರಿ 1,31,396 ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.
ವಂಚನೆಗೊಳಗಾದ ವ್ಯಕ್ತಿ ಮಂಗಳೂರು ಸೆನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.